ಮದುವೆ ಸಂಭ್ರಮದಲ್ಲಿದ್ದಾಗಲೇ ಮನೆಗೆ ಕನ್ನ ಅಫಜಲಪುರ: ಹಾಡಹಗಲಲ್ಲೇ ಸರಣಿ ಕಳ್ಳತನ

ಅಫಜಲಪುರ,ಜು.15-ಪಟ್ಟಣದ ಸಂಗು ಡಿಜಿಟಲ್ ಪ್ರಿಂಟಿಂಗ್ ಪ್ರೆಸ್ ಮಾಲೀಕ ಸಂಗನಬಸಪ್ಪ ಪತ್ತಾರ ಅವರ ಮಗನ ಮದುವೆ ದಿನದಂದೇ ಮನೆಗೆ ನುಗ್ಗಿದ ಕಳ್ಳರು ಕನ್ನ ಹಾಕಿರುವ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.
ಪಟ್ಟಣದ ಹೊರವಲಯದಲ್ಲಿರುವ ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಮದುವೆ ಕಾರ್ಯಕ್ರಮ ಹಿನ್ನೆಲೆ ಕುಟುಂಬಸ್ಥರೆಲ್ಲರೂ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಅಕ್ಷತಾರೋಹಣ ಕಾರ್ಯಕ್ರಮಕ್ಕೆ ಹೋದಾಗ ಮನೆಗೆ ಕನ್ನ ಹಾಕಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮದುವೆ ಸಂಭ್ರಮದಲ್ಲಿದ್ದ ಸಂಬಂಧಿಕರೆಲ್ಲರೂ ಆತಂಕ ವ್ಯಕ್ತಪಡಿಸಿ ಕಲ್ಯಾಣ ಮಂಟಪದಿಂದ ಓಡೋಡಿ ಮನೆಗೆ ಧಾವಿಸಿದರು. ಕಳ್ಳನ ಕೃತ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದು ಮನೆ ಕಳ್ಳತನ ನಡೆಸಿದ ಬಳಿಕ ಪಕ್ಕದ ಸಿದ್ದು ಡಾಂಗೆ, ಕಿರಾನಂದ ಪತ್ತಾರ, ಬಸವರಾಜ ನೂಲಾ ಹೀಗೆ ಒಟ್ಟು ಹಾಡಹಗಲೇ 4 ಮನೆಗಳಲ್ಲಿ ಸರಣಿ ಕಳ್ಳತನಕ್ಕೆ ಪ್ರಯತ್ನಿಸಿ ಹಣ ಹಾಗೂ ಬೆಳ್ಳಿ ಮತ್ತು ಬಂಗಾರದ ಒಡವೆಗಳನ್ನು ದೋಚಲಾಗಿದೆ.
ಸದ್ಯಕ್ಕೆ ಯಾರ ಮನೆಯಲ್ಲಿ ಏನೆಲ್ಲ ಕಳ್ಳತನವಾಗಿದೆ ಎಂಬ ನಿಖರವಾದ ಮಾಹಿತಿ ಇನ್ನು ತಿಳಿದು ಬಂದಿಲ್ಲ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.