ಮದುವೆ ಮಾಡಲು ನಿರಾಕರಿಸಿದ ತಾಯಿಯನ್ನು ಕೊಂದ ಮಗ

ಕಲಬುರಗಿ,ಫೆ.5-ಮಗನೇ ತಾಯಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಪೋಚಾವರಂ ಗ್ರಾಮದಲ್ಲಿ ನಡೆದಿದೆ.
ಶೋಭಾ ಅಂಜಪ್ಪ (45) ಕೊಲೆಯಾದವರು. ಮಗ ಅನೀಲ (23) ಎಂಬಾತನೇ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ಅನೀಲ ಮದುವೆ ಮಾಡುವಂತೆ ತಾಯಿಯನ್ನು ಪೀಡಿಸುತ್ತಿದ್ದ. ನೀನೇ ಸರಿಯಾಗಿ ಬದುಕು ನಡೆಸಲು ಆಗುತ್ತಿಲ್ಲ. ನಿನ್ನನ್ನು ನಾನೇ ದುಡಿದು ಹಾಕಬೇಕಾಗಿದೆ. ಇನ್ನು ಮದುವೆ ಮಾಡಿ ಇನ್ನೊಂದು ಹೆಣ್ಣಿನ ಬಾಳೇಕೆ ಹಾಳು ಮಾಡಲಿ ಎಂದು ತಾಯಿ ಮದುವೆ ಮಾಡಲು ನಿರಾಕರಿಸಿದ್ದಳು. ಇದರಿಂದ ಕುಪಿತನಾಗಿ ಅನೀಲ ಕಟ್ಟಿಗೆಯಿಂದ ಹೊಡೆದು ತಾಯಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಬಂಧ ಕೊಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.