ಮದುವೆ ಬಸ್ ಪಲ್ಟಿ: ೭ ಮಂದಿ ದುರ್ಮರಣ

ಸುಳ್ಯ:ಪುತ್ತೂರು ಕಡೆಯಿಂದ ಸುಳ್ಯ ಆಲೆಟ್ಟಿ ಮೂಲಕ ಪಾಣತ್ತೂರು ಕರಿಕೆ ಕಡೆಗೆ ಹೋಗುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಬಸ್ ಪಾಣತ್ತೂರು ಬಳಿ ಪಲ್ಟಿಯಾಗಿದ್ದು, ಏಳು ಮಂದಿ ಮೃತಪಟ್ಟಿದ್ದಾರೆಂಬ ಮಾಹಿತಿ ಲಭಿಸಿದೆ.
ಪಾಣತ್ತೂರು ಬಳಿಯ ಕೊಡಗು ಜಿಲ್ಲಾ ವ್ಯಾಪ್ತಿಯ ಚೆತ್ತುಕಯ ಎಂಬಲ್ಲಿ ವರನ ಮನೆಯಲ್ಲಿ ಇದ್ದ ಮದುವೆ ಕಾರ್ಯಕ್ರಮಕ್ಕೆ ವಧುವಿನ ಊರಾದ ಈಶ್ವರ ಮಂಗಲದಿಂದ ವಧುವಿನ ದಿಬ್ಬಣ ಹೋಗುತ್ತಿತ್ತು. ವಧು ಮತ್ತು ಇತರರು ಟಿಟಿ ವಾಹನದಲ್ಲಿ ಹೋಗುತ್ತಿದ್ದರು. ಹಿಂದಿನಿಂದ ಖಾಸಗಿ ಬಸ್ ನಲ್ಲಿ ೬೦ ಕ್ಕೂ ಹೆಚ್ಚು ಮಂದಿ ಹೋಗುತ್ತಿದ್ದರು.
ಕಲ್ಲಪ್ಪಳ್ಳಿ – ಪಾಣತ್ತೂರು ಮಧ್ಯೆ ಪೆರಿಯಾರಂ ಎಂಬಲ್ಲಿ ಇಳಿಜಾರಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಬಸ್ ಉರುಳಿ ಬಿದ್ದು ದುರಂತ ಸಂಭವಿಸಿದೆ.
ಸುಮಾರು ೩೦ರಷ್ಟು ಮಂದಿಗೆ ಜಖಂ ಆಗಿದ್ದು, ಇಬ್ಬರು ಬಾಲಕರು ಸೇರಿದಂತೆ ಏಳು ಮಂದಿ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ.ಮೃತರನ್ನು ರಾಜೇಶ್, ರವಿಚಂದ್ರ, ಆದರ್ಶ್, ಶ್ರೇಯಸ್, ಸುಮತಿ, ಶಶಿ, ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ.
೩೫ ಮಂದಿಯನ್ನು ಕಾಞಂಗಾಡ್ ಆಸ್ಪತ್ರೆಗೂ ೧೧ ಮಂದಿಯನ್ನು ಮಂಗಳೂರು ಆಸ್ಪತ್ರೆಗೂ ದಾಖಲಿಸಲಾಗಿದ್ದು, ಈ ಪೈಕಿ ಹತ್ತಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಗಾಯಾಳುಗಳನ್ನು ಪಾಣತ್ತೂರು, ಪೂಡಂಕಲ್ಲು ಹಾಗೂ ಕಾಂಞಂಗಾಡ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಗೆ ಕೇರಳ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ. ಘಟನೆಯ ತನಿಖೆಗೆ ಕೇರಳ ಸಾರಿಗೆ ಮಂತ್ರಿ ಆದೇಶಿಸಿದ್ದು, ಕಾಸರಗೋಡು ಜಿಲ್ಲಾಧಿಕಾರಿಯವರು ಕಾಞಂಗಾಡ್ ಸಹಾಯಕ ಕಮೀಷನರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸುಳ್ಯದ ಇಬ್ಬರು ಮೃತರು: ಮೃತಪಟ್ಟವರಲ್ಲಿ ಇಬ್ಬರು ಸುಳ್ಯದವರು. ಅವರಲ್ಲಿ ಜಾಲ್ಸೂರು ಗ್ರಾಮದ ಕುಕ್ಕಂದೂರಿನ ರವಿಚಂದ್ರ ನಾಯ್ಕ್ ಎಂಬವರು ಮೃತಪಟ್ಟವರು.ರವಿಚಂದ್ರ ನಾಯ್ಕ್‌ರವರು ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋಣಂಗೇರಿ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ರವಿಚಂದ್ರರ ಪತ್ನಿಯ ತಂಗಿಯ ಮದುವೆ ಕೆಲದಿನಗಳ ಹಿಂದೆ ಕರಿಕೆಯ ಯುವಕನೊಂದಿಗೆ ನಡೆದಿದ್ದು, ಭಾನುವಾರ ಬೀಗರೂಟಕ್ಕೆ ಬಂಧುಗಳೆಲ್ಲ ಜೊತೆಯಾಗಿ ಬಸ್‌ನಲ್ಲಿ ಕರಿಕೆಗೆ ತೆರಳುತ್ತಿದ್ದರು. ಇನ್ನೊಬ್ನರು ಸುಮತಿ ಇವರನ್ನು ಸುಳ್ಯದ ಅಮರಮೂಡ್ನೂರು ಗ್ರಾಮದ ಮುಂಡಕಜೆಗೆ ಮದುವೆ ಮಾಡಿ ಕೊಟ್ಟಿದ್ದರು. ಆದರೆ ಅವರು ಗಂಡನ ಮನೆಯಲ್ಲಿರದೆ ತನ್ನ ತಾಯಿ ಮನೆ ಪುತ್ತೂರಿನ ಬಲ್ನಾಡುವಿನಲ್ಲಿ ವಾಸ ಮಾಡಿಕೊಂಡಿದ್ದರು.