ಮದುವೆ ಬಳಿಕ ಸೆಲ್ಫಿ ತೆಗೆದುಕೊಂಡು ನೇಣಿಗೆ ಶರಣಾದ ಜೋಡಿ

ಕಲಬುರಗಿ:ಫೆ.3 – ವರಸೆಯಲ್ಲಿ ಅಣ್ಣ ತಂಗಿ ಆಗಿದ್ದ ಪ್ರೇಮಿಗಳಿಬ್ಬರು ಹಿರಿಯರ ವಿರೋಧದ ಮಧ್ಯೆಯೂ ಮದುವೆಯಾಗಿ, ಸೆಲ್ಫಿ ತೆಗೆದುಕೊಂಡ ಬಳಿಕ ಜೊತೆಯಲ್ಲೇ ನೇಣು ಹಾಕಿಕೊಂಡ ಘಟನೆ ಯಡ್ರಾಮಿ ತಾಲೂಕಿನ ಮಾಗಣಗೇರಾ ಗ್ರಾಮದಲ್ಲಿ ನಡೆದಿದೆ.
ಶಶಿಕಲಾ (20 ) ಹಾಗೂ ಗೊಲ್ಲಾಳಪ್ಪ (24) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಇಬ್ಬರೂ ವರಸೆಯಲ್ಲಿ ಅಣ್ಣ-ತಂಗಿ ಆಗಿದ್ದ ಕಾರಣಕ್ಕೆ ಮನೆಯ ಹಿರಿಯರು ಈ ಸಂಬಂಧಕ್ಕೆ ಒಪ್ಪಿಗೆ ನೀಡಿರಲಿಲ್ಲ ಎನ್ನಲಾಗಿದೆ. ಹಾಗಾಗಿ, ಶಶಿಕಲಾಗೆ ಸಿಂದಗಿ ತಾಲೂಕಿನ ಗ್ರಾಮವೊಂದರ ಯುವಕನೊಂದಿಗೆ ಇತ್ತೀಚೆಗೆ ನಿಶ್ಚಿತಾರ್ಥ ನೆರವೇರಿಸಿ, ಮುಂದಿನ ತಿಂಗಳು ಮದುವೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.
ಈ ಮಧ್ಯೆ, ಪರಸ್ಪರ ಒಬ್ಬರನ್ನೊಬ್ಬರು ಅಗಲಿ ಇರಲಾಗದ ಕಾರಣಕ್ಕಾಗಿ ಗೊಲ್ಲಾಳಪ್ಪ ನಿನ್ನೆ ರಾತ್ರಿಯೇ ಶಶಿಕಲಾಳನ್ನು ತನ್ನೊಂದಿಗೆ ಕರೆದೊಯ್ದು ಗ್ರಾಮದ ಹೊರವಲಯದ ದೇವಾಲಯದಲ್ಲಿ ತಾಳಿ ಕಟ್ಟಿ ಮದುವೆ ಮಾಡಿಕೊಂಡಿದ್ದ. ಬಳಿಕ ತಾವು ಮದುವೆ ಆಗಿರುವುದನ್ನು ದೃಢಪಡಿಸಲು ಇಬ್ಬರೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಮೀಪದ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.ಯಡ್ರಾಮಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.