ನ್ಯೂ ಸೌತ್ ವೇಲ್ಸ್ (ಆಸ್ಟ್ರೇಲಿಯಾ), ಜೂ.೧೨- ಮದುವೆ ದಿಬ್ಬಣದ ಬಸ್ ಪಲ್ಟಿಯಾದ ಪರಿಣಾಮ ೧೦ ಮಂದಿ ಮೃತಪಟ್ಟು, ೨೦ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಹಂಟರ್ ವ್ಯಾಲಿಯಲ್ಲಿ ಆದಿತ್ಯವಾರ ತಡರಾತ್ರಿ ನಡೆದಿದೆ. ಇನ್ನು ಘಟನೆಯಲ್ಲಿ ಮೃತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಲ್ಲಿನ ವೈನ್ ಎಸ್ಟೇಟ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಳಿಕ ಹಿಂದಿರುಗುತ್ತಿದ್ದ ವೇಳೆ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ೫೮ ವರ್ಷದ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳೀಯ ಸಮಯ ೨೩:೩೦ ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಹೆದ್ದಾರಿಯಿಂದ ವೃತ್ತದಲ್ಲಿ ತಿರುವು ಮಾಡುವಾಗ ಬಸ್ ಉರುಳಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ನ್ಯೂ ಸೌತ್ ವೇಲ್ಸ್‌ನ ಹಂಗಾಮಿ ಪೊಲೀಸ್ ಕಮಿಷನರ್ ಟ್ರೇಸಿ ಚಾಪ್‌ಮೆನ್, ಬಹುಷಃ ಮದುವೆ ಬಳಿಕ ಅತಿಥಿಗಳು ವಸತಿಗಾಗಿ ಸಿಂಗಲ್‌ಟನ್‌ಗೆ ಪ್ರಯಾಣಿಸುತ್ತಿದ್ದರು. ೨೫ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಇಬ್ಬರನ್ನು ಏರ್‌ಲಿಫ್ಟ್ ಮಾಡಲಾಗಿದೆ. ಬಸ್ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಆತನ ವಿರುದ್ಧ ನಮಗೆ ಸಾಕಷ್ಟು ಸಾಕ್ಷ್ಯಾಧಾರಗಳು ಇವೆ. ಸದ್ಯ ಆತನನ್ನು ಕೂಡ ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ವೇಳೆ ಮಂಜು ಕವಿದ ವಾತಾವರಣ ಇತ್ತು ಎಂದು ಅವರು ತಿಳಿಸಿದ್ದಾರೆ. ಇನ್ನು ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಆಂಥನಿ ಅಲ್ಬೇನಿಸ್, ಅತ್ಯಂತ ಸುಂದರ ಹಾಗೂ ಸಂತೋಷದಾಯಕ ದಿನದಲ್ಲಿ ಈ ರೀತಿಯಲ್ಲಿ ನಡೆದಿರುವುದು ಅಂತಹ ಕ್ರೂರ, ತುಂಬಾ ದುಃಖ ಮತ್ತು ಅನ್ಯಾಯವಾಗಿದೆ. ಜನರು ತಮ್ಮ ಅತಿಥಿಗಳನ್ನು ಸುರಕ್ಷಿತವಾಗಿರಿಸಲು ಮದುವೆಗಳಿಗೆ ಬಸ್ ಅನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ ಮತ್ತು ಇದು ಈ ದುರಂತದ ಊಹೆಗೂ ನಿಲುಕದ ಸ್ವರೂಪವನ್ನು ಹೆಚ್ಚಿಸುತ್ತದೆ. ಗಾಯಗೊಂಡ ಕೆಲವರನ್ನು ಜಾನ್ ಹಂಟರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನವರನ್ನು ಸಿಡ್ನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಕ್ಯಾನ್‌ಬೆರಾದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.