ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ

ಎಸ್ಪಿ ಕಛೇರಿ ಮುಂದೆ ಪ್ರಿಯತಮೆ ದೂರು
ರಾಯಚೂರು.ಮೇ.೩೦- ಪ್ರೀತಿಸಿ ಬೇರೊಬ್ಬ ಯುವತಿಯ ಜೊತೆಗೆ ವಿವಾಹವಾಗಲು ಮುಂದಾಗಿರುವ ಪ್ರಿಯಕರನ ಜೊತೆಗೆ ನನ್ನ ಮದುವೆ ಮಾಡಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಯುವತಿಯೊಬ್ಬಳು ನಗರದ ಎಸ್ ಪಿ ಕಚೇರಿ ಮುಂದೆ ಪಾಲಕರೊಂದಿಗೆ ಕಣ್ಣೀರಿಟ್ಟು ಮನವಿ ಮಾಡಿದರು.
ತಾಲೂಕಿನ ವಡವಾಟಿ ಗ್ರಾಮದ ಪ್ರಿಯಕರ ಮಲ್ಲೇಶ ಮತ್ತು ಬಾಪೂರು ಗ್ರಾಮದ ಉಮೇಶಮ್ಮ ಇಬ್ಬರು ಪರಸ್ಪರ ಪ್ರೀತಿಸಿಕೊಂಡಿದ್ದರು. ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಏಕಾಏಕಿ ಪ್ರಿಯಕರ ಮಲ್ಲೇಶನ ಮದುವೆ ನಿಗದಿ ತಳಮಳಕ್ಕೆ ಕಾರಣವಾಯಿತು. ಕಳೆದ ಎರಡು ದಿನಗಳ ಹಿಂದೆ ಏಗನೂರು ಟೆಂಪಲ್ ಹತ್ತಿರದಲ್ಲಿ ಈ ಇಬ್ಬರು ಕುಳಿತಿದ್ದ ಸಂದರ್ಭದಲ್ಲಿ ಪೊಲೀಸರು ಇವರನ್ನು ಠಾಣೆಗೆ ಕರೆತಂದಿದ್ದರು. ಅಲ್ಲಿ ಸಮಸ್ಯೆಯನ್ನು ನೇತಾಜಿ ಠಾಣಾ ಪಿಎಸ್‌ಐ ಬಸವರಾಜ ಗಮನಕ್ಕೆ ತರಲಾಗಿತ್ತು.
ಈ ಸಂದರ್ಭದಲ್ಲಿ ಬಸವರಾಜ ಅವರು ತಮ್ಮ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆಂದು ಪ್ರಿಯತಮೆ ಉಮೇಶಮ್ಮ ತಿಳಿಸಿದರು. ಆದರೆ, ಈಗ ನಾಳೆಯೇ ತನ್ನ ಪ್ರಿಯಕರ ಮದುವೆ ನಡೆಯುತ್ತಿದ್ದರಿಂದ ಆಂತಕಿತವಾದ ಉಮೇಶಮ್ಮ ತಮ್ಮ ಪಾಲಕರೊಂದಿಗೆ ನೇರವಾಗಿ ಎಸ್ಪಿ ಕಛೇರಿಗೆ ಆಗಮಿಸಿ, ತಮ್ಮ ಮದುವೆ ನಡೆಸಿಕೊಡುವಂತೆ ಗೋಳು ತೋಡಿಕೊಂಡಳು. ಯುವತಿಯೊಂದಿಗೆ ಅವರ ಪಾಲಕರು ಬಂದಿರುವುದು ಗಮನಾರ್ಹವಾಗಿತ್ತು. ಪೊಲೀಸ್ ಮೇಲಾಧಿಕಾರಿಗಳ ಭೇಟಿಯ ನಂತರ ಮುಂದಿನ ನಿರ್ಧಾರ ಏನೆನ್ನುವುದು ಸ್ಪಷ್ಟಗೊಳ್ಳಲಿದೆ.