ಮದುವೆಗೆ ಹೊರಟ ಮೂವರು ಮಸಣಕ್ಕೆ

ಬೆಂಗಳೂರು, ಮಾ.೨೨- ನಿಂತಿದ್ದ ಟೆಂಪೋ ಟ್ರಾವೆಲರ್ (ಟಿಟಿ)ಗೆ ಟ್ಯಾಂಕರ್ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಾಯಗೊಂಡಿರುವ
ಧಾರುಣ ಘಟನೆ ಚನ್ನಪಟ್ಟಣದ ಯಾರಬ್ ನಗರದ ಬಳಿ ನಿನ್ನೆ ರಾತ್ರಿ ನಡೆದಿದೆ.
ಅಂಜನಾಪುರದ ವಿಜಯ್, ಪ್ರದೀಪ್ ಹಾಗೂ ಮದನ್ ಮೃತಪಟ್ಟವರು.
ವಾಹನಗಳ ಅಕ್ಕಪಕ್ಕ ನಿಂತಿದ್ದ ವಿಜಯ್, ಆನಂದ್, ಪ್ರಕಾಶ್ ಹಾಗೂ ಸಿದ್ದೇಶ್ ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅತಿವೇಗವಾಗಿ ಬಂದ ಸರಕು ಸಾಗಣೆ ಕ್ಯಾಂಟರ್‌ವೊಂದು ಮೊದಲು ರಸ್ತೆಬದಿಯಲ್ಲಿ ನಿಂತಿದ್ದ ಜೀಪ್‌ವೊಂದಕ್ಕೆ ಡಿಕ್ಕಿ ಹೊಡೆದು, ಎದುರು ನಿಂತಿದ್ದ ಟೆಂಪೋ ಟ್ರಾವಲರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದು, ಆನಂತರ ಮತ್ತೊಂದು ಟೆಂಪೋ ಟ್ರಾವಲರ್‌ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.
ಮೈಸೂರಿನಲ್ಲಿ ಮದುವೆ:
ಮೈಸೂರಿನಲ್ಲಿ ಇಂದು ನಡೆಯಲಿದ್ದ ಮದುವೆಗೆ ಅಂಜನಾಪುರದ ಬಳಿಯಿಂದ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿತ್ತು.
ಅದೇ ರೀತಿ ಮತ್ತೊಂದು ಟೆಂಪೋ ಟ್ರಾವಲ್‌ನಲ್ಲಿ ಮಲೈ ಮಹದೇಶ್ವರ ಬೆಟ್ಟಕ್ಕೆ ಪ್ರಯಾಣಿಕರನ್ನು ಕರೆದೊಯ್ಯುಲಾಗುತ್ತಿತ್ತು.
ರಾತ್ರಿ ೧೧.೪೫ರ ಸಮಯದಲ್ಲಿ ಒಂದು ಟೆಂಪೋ ಟ್ರಾವಲರ್ ವಾಹನ ಕೆಟ್ಟು ಪಟ್ಟಣದ ಹನುಮಂತನಗರದ ಬಳಿ ನಿಂತಿದೆ.
ಚಾಲಕನ ತಪಾಸಣೆ:
ಅದರ ಚಾಲಕ ಮೃತ ಪ್ರದೀಪ್ ಹೆದ್ದಾರಿಯ ಬದಿಯಲ್ಲಿ ಅದನ್ನು ನಿಲ್ಲಿಸಿ ಪರೀಕ್ಷೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನು ನೋಡಿದ ಮತ್ತೊಂದು ಟೆಂಪೋ ಟ್ರಾವಲರ್ ಚಾಲಕ ಸಿದ್ದೇಶ್ ತನ್ನ ವಾಹನ ನಿಲ್ಲಿಸಿದ್ದಾರೆ. ತಾವೂ ಸಹ ಆ ವಾಹನವನ್ನು ಪರೀಕ್ಷಿಸಲೆಂದು ತೆರಳಿದ್ದಾರೆ. ಸಿದ್ದೇಶ್ ಜತೆಗೆ ಪ್ರಯಾಣಿಸುತ್ತಿದ್ದ ವಿಜಯ್, ಆನಂದ್, ಪ್ರಕಾಶ್, ಮತ್ತೊಬ್ಬ ವಿಜಯ್, ಮದನ್ ಎಂಬುವವರು ಕೆಳಗಿಳಿದು ಹೋಗಿದ್ದರು ಎಂದು ರಾಮನಗರ ಎಸ್ ಪಿ ಗಿರೀಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕ್ಯಾಂಟರ್ ಚಾಲಕ ಅತಿವೇಗವಾಗಿ ಬಂದು ಎಡಬದಿಯಲ್ಲಿ ಟಿಟಿ ವಾಹನದ ಹಿಂದೆ ನಿಂತಿದ್ದ ಜೀಪ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಮತ್ತೊಂದು ಟಿಟಿಗೆ ಡಿಕ್ಕಿ:
ವಾಹನ ನಿಯಂತ್ರಿಸಲಾಗದೆ ಅದರ ಮುಂದೆ ನಿಂತಿದ್ದ ಟಿಟಿ ವಾಹನ ಅದರ ಮುಂದೆ ನಿಂತಿದ್ದ ಸ್ವಿಫ್ಟ್ ಕಾರಿಗೆ ಹಾಗೂ ಅದರ ಮುಂದೆ ಇದ್ದ ಮತ್ತೊಂದು ಟಿಟಿಗೆ ಡಿಕ್ಕಿ ಹೊಡೆದಿದ್ದಾನೆ.
ಈ ವೇಳೆ ತೀವ್ರವಾಗಿ ಗಾಯಗೊಂಡ ಮದನ್ ಸ್ಥಳದಲ್ಲೇ ಮೃತಪಟ್ಟರೆ, ವಿಜಯ್ ಎಂಬುವವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ.
ಪ್ರಕರಣ ದಾಖಲು:
ಉಳಿದ ಗಾಯಾಳುಗಳನ್ನು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು, ಆದರೆ ಪ್ರದೀಪ್ ಎಂಬುವವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಚನ್ನಪಟ್ಟಣ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.