ಮದುವೆಗೆ ಹೊರಟಿದ್ದ ಮಾವ, ಸೊಸೆ ರಸ್ತೆ ಅಪಘಾತದಲ್ಲಿ ಸಾವು

ಕಲಬುರಗಿ,ಫೆ.26-ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಮಾವ-ಸೊಸೆ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿಗೆ ಸಮೀಪದ ಅವರಾದ (ಬಿ) ಹತ್ತಿರ ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಬೇಲೂರ (ಜೆ) ಗ್ರಾಮದ ಗುರುನಾಥ ದಂಡಗೂಳಕರ್ (50) ಮತ್ತು ಅವರ ಸೊಸೆ ಸಂಗೀತಾ ಗಂಡ ಶಂಕರ (35) ಎಂದು ಗುರುತಿಸಲಾಗಿದೆ. ಲಕ್ಷ್ಮಣ ಕುಸಲಕರ್ ಎಂಬಾತ ಗಾಯಗೊಂಡಿದ್ದು, ಅವರನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುನಾಥ, ಸಂಗೀತಾ ಮತ್ತು ಲಕ್ಷ್ಮಣ ಬೈಕ್ ಮೇಲೆ ಬಸವಕಲ್ಯಾಣಕ್ಕೆ ಮದುವೆ ಸಮಾರಂಭಕ್ಕೆ ಹೊರಟಿದ್ದರು ಎಂದು ತಿಳಿದುಬಂದಿದೆ. ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.