ಮದುವೆಗೆ ನಿರಾಕರಣೆ ಮಹಿಳೆ ಕೊಚ್ಚಿ ಕೊಲೆ

ಬೆಳಗಾವಿ, ಡಿ ೩೦- ಮಾರಕಾಸ್ತ್ರದಿಂದ ಮಹಿಳೆಯೋರ್ವಳನ್ನು ಕೊಚ್ಚಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಇಲ್ಲಿನ ಜಿಲ್ಲಾ ಆಸ್ಪತ್ರೆಯ ಬಳಿ ಇಂದು ಬೆಳಿಗ್ಗೆ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಬೈಲಹೊಂಗಲ ತಾಲೂಕಿನ ಮೂಗಬಸವ ಗ್ರಾಮದ ಸುಧಾರಾಣಿ ಎಂದು ಗುರುತಿಸಲಾಗಿದೆ.
ಈರಣ್ಣ ಬಾಬು ಜಗಜಪತಿ ಎಂಬಾತನೇ ಕೊಲೆ ಮಾಡಿದ ಆರೋಪಿ ಎಂದು ಹೇಳಲಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ರಕ್ಷಣಾ ಸಿಬ್ಬಂದಿಯಾಗಿ ಸುಧಾರಾಣಿ ಕೆಲಸ ಮಾಡುತ್ತಿದ್ದಳು.
ಕೊಲೆಯಾದ ಸುಧಾರಾಣಿ ಆರೋಪಿ ಈರಣ್ಣನನ್ನು ಮದುವೆ ಆಗುವುದಾಗಿ ಮಾತು ಕೊಟ್ಟಿದ್ದು ಆತನಿಂದ ಹಣವನ್ನು ಪಡೆದಿದ್ದಳು. ನಂತರ ಮದುವೆಯಾಗದೇ ನಿರ್ಲಕ್ಷ ಮಾಡುತ್ತಿದ್ದಳು ಎಂದು ಆರೋಪಿ ಈರಣ್ಣ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಅಲ್ಲದೆ ಈ ಮೊದಲು ಸುಧಾರಾಣಿ ಓರ್ವ ವ್ಯಕ್ತಿಯನ್ನು ಮದುವೆಯಾಗಿದ್ದಳು ಎಂದು ಈರಣ್ಣ ಹೇಳಿದ್ದಾನೆ.
ಇಂದು ಬೆಳಿಗ್ಗೆ ಆಸ್ಪತ್ರೆಯ ಕ್ಯಾಂಟೀನ್ ಬಳಿಯೇ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರೆದಿದೆ.