ಮದುವೆಗಾಗಿ ಮತಾಂತರ ಕಾನೂನು ಜಾರಿಗೆ ಕ್ರಮ

ಬೆಂಗಳೂರು,ನ.೪- ಮದುವೆಗಾಗಿ ಮತಾಂತರ ತಡೆಯುವ ಕಾನೂನು ರಾಜ್ಯದಲ್ಲೂ ಜಾರಿಯಾಗಬೇಕು. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆ ಚರ್ಚೆ ನಡೆಸಿ ಕಾನೂನು ಜಾರಿಗೆ ಕ್ರಮಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಲವ್ ಜಿಹಾದ್ ಹೆಸರಿನಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ವಂಚಿಸುವ ಕೆಲಸ ನಡೆಯುತ್ತಿದೆ. ಈ ಲವ್ ಜಿಹಾದ್ ರಾಜ್ಯದಿಂದ ತೊಲಗಬೇಕು ಎಂದು ಅವರು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಮದುವೆಗಾಗಿ ಮತಾಂತರ ಆಗುವುದನ್ನು ತಡೆಯಲು ಉತ್ತರ ಪ್ರದೇಶದಲ್ಲಿ ಕಾನೂನು ಜಾರಿಯಾಗಿದೆ. ರಾಜ್ಯದಲ್ಲೂ ಇದೇ ರೀತಿಯ ಕಾನೂನನ್ನು ಜಾರಿಗೊಳಿಸಿ ಅಮಾಯಕ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಪಾಶದಿಂದ ಮುಕ್ತಿಗೊಳಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂದರು.
ಲವ್ ಜಿಹಾದ್‌ನ ಹಿಂದೆ ಮತಾಂತರದ ಉದ್ದೇಶ ಇರುತ್ತದೆ. ಇದೆಲ್ಲದ್ದಕ್ಕೂ ತಡೆ ಹಾಕಬೇಕು ಎಂದು ಅವರು ಹೇಳಿದರು.
ವಿಧಾನಸಭೆಯ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತದೆ. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಡಿ.ಕೆ ಶಿವಕುಮಾರ್ ಬ್ರದರ್‍ಸ್ ಕೊನೇ ಘಳಿಗೆಯಲ್ಲಿ ಕೆಲವು ಆಟಗಳನ್ನು ಆಡಲು ಪ್ರಯತ್ನಿಸಿದರು ಏನೇ ಇರಲಿ ಗೆಲುವು ಬಿಜೆಪಿಯದೇ ಎಂದರು.