ಮದುವೆಗಳಿಗೆ 25 ಜನರಿಗೆ ಮಾತ್ರ ಅವಕಾಶ!

ಲಕ್ನೋ: ಉತ್ತರ ಪ್ರದೇಶ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ, ಅಲ್ಲಿನ ರಾಜ್ಯ ಸರ್ಕಾರವು ಕೋವಿಡ್ ಮಾರ್ಗಸೂಚಿಗಳಲ್ಲಿ ಮತ್ತಷ್ಟು ಬದಲಾವಣೆ ತಂದಿದೆ. ಈ ಮೊದಲು ೫೦ ಜನರಿಗೆ ಅವಕಾಶ ಕಲ್ಪಿಸಲಾಗುತ್ತಿದ್ದ ವಿವಾಹ ಸಮಾರಂಭಗಳಿಗೆ, ಪ್ರಸ್ತುತ ೨೫ ಜನರಿಗೆ ಮಾತ್ರ ಅನುಮತಿ ನೀಡಲು ನಿರ್ಧರಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪರಿಷ್ಕೃತ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸುವ ಮೂಲಕ, ಕೊರೊನಾ ಸೋಂಕು ಉಲ್ಬಣಗೊಳ್ಳದಂತೆ ಎಚ್ಚರವಹಿಸುವಂತೆ ಸೂಚಿಸಿದ್ದಾರೆ.
ಈ ಮೊದಲು ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭಗಳಲ್ಲಿ ೫೦ ಜನರಿಗೆ ಹಾಗೂ ಮುಕ್ತ ಪ್ರದೇಶಗಳಲ್ಲಿ ಆಯೋಜಿತವಾಗುವ ಕಾರ್ಯಕ್ರಮಗಳಲ್ಲಿ ೧೦೦ ಜನರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಸಮಾರಂಭಗಳಲ್ಲಿ ಭಾಗವಹಿಸುವವರು ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳವಿಕೆ, ಸ್ಯಾನಿಟೈಸರ್ ಬಳಕೆಯ ಬಗ್ಗೆ ಕಡ್ಡಾಯ ಅರಿವು ಮೂಡಿಸಬೇಕು
ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮುಂದೂಡಿಕೆ: ಉತ್ತರ ಪ್ರದೇಶ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಇದರಿಂದ ರಾಜಧಾನಿ ಲಕ್ನೋವೊಂದರಲ್ಲಿಯೇ ಇಲ್ಲಿಯವರೆಗೂ ೨೭೦೦ ಕ್ಕೂ ಅಧಿಕ ಮದುವೆ ಸಮಾರಂಭಗಳನ್ನು ಮುಂದೂಡಲಾಗಿದೆ. ಕಲ್ಯಾಣ ಮಂಟಪಗಳಲ್ಲಿ ಮುಂಗಡ ಬುಕ್ಕಿಂಗ್ ಕೂಡ ರದ್ದುಗೊಳಿಸಲಾಗಿದ್ದು, ಹಲವು ಸಮುದಾಯ ಭವನಗಳಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗುತ್ತಿಲ್ಲವಾಗಿದೆ.
ಸೋಂಕಿನ ಪ್ರಮಾಣ: ಮಂಗಳವಾರ ರಾಜ್ಯದಲ್ಲಿ ೮೭೩೭ ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ೨೫೫ ಜನರು ಮೃತಪಟ್ಟಿದ್ದಾರೆ. ಸದ್ಯ ರಾಜ್ಯದಲ್ಲಿ ೧೬,೩೭,೬೬೩ ಸಕ್ರಿಯ ಪ್ರಕರಣಗಳಿವೆ ಎಂದು ಆ ರಾಜ್ಯದ ಆರೋಗ್ಯ ಇಲಾಖೆ ವರದಿಗಳು ಮಾಹಿತಿ ನೀಡಿವೆ.