ಮದಲೂರು ಕೆರೆ ಭರ್ತಿಯಾಗುವರೆಗೂ ನೀರು ಹರಿಯಲಿದೆ: ಡಾ. ರಾಜೇಶ್‌ಗೌಡ

ಸಿರಾ, ಡಿ. ೧೮- ಕ್ಷೇತ್ರದ ಜನರಿಗೆ ಕೊಟ್ಟ ಭರವಸೆಯಂತೆ ಮದಲೂರು ಕೆರೆ ಭರ್ತಿಯಾಗುವವರೆಗೂ ಹೇಮಾವತಿ ನೀರು ಹರಿಯಲಿದೆ ಎಂದು ಶಾಸಕ ಡಾ. ಸಿ.ಎಂ. ರಾಜೇ???ಗೌಡ ಹೇಳಿದರು.
ತಾಲ್ಲೂಕಿನ ಮದಲೂರು ಗ್ರಾಮದ ಐತಿಹಾಸಿಕ ಪ್ರಸಿದ್ಧ ಮದಲೂರು ಕೆರೆಯಲ್ಲಿ ಶೇಖರಣೆಯಾಗುತ್ತಿರುವ ನೀರಿನ ಪ್ರಮಾಣವನ್ನು ವೀಕ್ಷಿಸಿ ಅವರು ಮಾತನಾಡಿದರು.
ನ. ೩೦ ರಿಂದ ಮದಲೂರು ಕೆರೆಗೆ ನೀರು ಬಿಡಲಾಗಿದೆ. ಅದೇ ರೀತಿ ಪಟ್ರಾವತನಹಳ್ಳಿ ಕಾಲುವೆಯಿಂದ ಕಳ್ಳಂಬೆಳ್ಳ ಕೆರೆಗೆ ಹರಿಯುತ್ತಿರುವ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಈಗಾಗಲೇ ಸಿರಾ ದೊಡ್ಡಕೆರೆ ಭರ್ತಿಯಾಗಿದೆ. ಮದಲೂರು ಕೆರೆ ಭರ್ತಿಯಾದ ನಂತರ ಉಳಿಕೆ ನೀರಿನಿಂದ ಕಳ್ಳಂಬೆಳ್ಳ ಕೆರೆ ಕೂಡ ಭರ್ತಿಯಾಗಿ ಉಳಿಯಲಿದೆ ಎಂದರು.
ಸಿರಾಕ್ಕೆ ಬೃಹತ್ ನೀರಾವರಿ ಯೋಜನೆ
೯೫೦ ಕೋಟಿ ರೂಪಾಯಿ ವೆಚ್ಚದ ಅಪ್ಪರ ಭದ್ರ ಬೃಹತ್ ನೀರಾವರಿ ಯೋಜನೆಗೆ ಈ ಹಿಂದೆ ೬೫ ಕೆರೆಗಳು ಸೇರ್ಪಡೆಯಾಗಿದ್ದವು. ನಾನು ಶಾಸಕನಾದ ಮೇಲೆ ಮತ್ತೆ ೧೦ ಕೆರೆಗಳನ್ನು ಸೇರ್ಪಡೆ ಮಾಡಿರುವ ಕಾರಣ ಸಿರಾ ತಾಲ್ಲೂಕಿನ ೭೫ ಕೆರೆಗಳು ಭರ್ತಿಯಾಗಲಿವೆ. ಇದರಿಂದ ಗೌಡಗೆರೆ, ಕಸಬಾ, ಹುಲಿಕುಂಟೆ, ಕಳ್ಳಂಬೆಳ್ಳ ಹೋಬಳಿಗಳ ಎಲ್ಲಾ ಗ್ರಾಮಗಳ ಅಂತರ್ಜಲ ಮಟ್ಟ ಸುಧಾರಣೆಯಾಗಲಿದ್ದು, ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಲಿದೆ ಎಂದರು.
ಅಪ್ಪರ್ ಭದ್ರ ಯೋಜನೆ ಕಚೇರಿ ಆರಂಭಕ್ಕೆ ೩ ಎಕರೆ ಭೂಮಿ ಗುರುತಿಸಲಾಗಿದ್ದು, ಮದಲೂರು ಕೆರೆ ಭರ್ತಿಯಾದ ತಕ್ಷಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆರೆ ವೀಕ್ಷಣೆಗೆ ಆಗಮಿಸಿ ಬಾಗಿನ ಆರ್ಪಿಸುವುದರ ಜತೆಗೆ ಅಪ್ಪರ್ ಭದ್ರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಪೈಪ್‌ಲೈನ್ ಮೂಲಕ ನಿಗದಿತ ಕೆರೆಗಳಿಗೆ ನೀರು ಹರಿಸುವ ಗುರಿ ಹೊಂದಿದ್ದ ಕಾಮಗಾರಿ ೨ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.
ಸಿರಾ ತಾಲ್ಲೂಕಿನ ಮದಲೂರು ಕೆರೆಯ ಭೂ ಪ್ರದೇಶ ಆಂಧ್ರ ಗಡಿಗೆ ಹೊಂದಿಕೊಂಡಿರುವ ಕಾರಣ ಅಲ್ಲಿನ ಸರ್ಕಾರ ತನ್ನ ಭೂ ಪ್ರದೇಶಕ್ಕೆ ಫೀಡರ್ ಕಾಲುವೆ ತೋಡಿಕೊಂಡಿದೆ. ಇದರಿಂದ ಮಳೆ ಬಂದ ಸಂಧರ್ಭದಲ್ಲಿ ಕೆರೆಗೆ ನೀರು ಬರುತ್ತಿರಲಿಲ್ಲ. ಕೆರೆ ಭರ್ತಿಯಾಗಿ ೩೦ ವರ್ಷ ಕಳೆದಿದೆ. ಇದೀಗ ಕಾಲುವೆ ಮೂಲಕ ಹೇಮಾವತಿ ನೀರು ಬಿಟ್ಟಿರುವ ಕಾರಣ ರೈತನ ಕಣ್ಣಲ್ಲಿ ಹರ್ಷದ ಹೊನಲು ಹರಿಸಿದ್ದು, ನಿತ್ಯ ದೂರದ ಗ್ರಾಮಗಳ ನೂರಾರು ಜನ ವೀಕ್ಷಣೆಗೆ ಬಂದ ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ವಿಎಸ್‌ಎಸ್‌ಎನ್ ನಿರ್ದೇಶಕ ಸೂರ್ಯಗೌಡ, ಮುಖಂಡರಾದ ಮಾಲಿಗೌಡ, ವಕೀಲ ರಾಜು, ಸುರೇಶ್, ಬಿ.ಹೆಚ್. ಸತೀಶ್ ಮತ್ತಿತರರು ಉಪಸ್ಥಿತರಿದ್ದರು.