ಮದಲೂರು ಕೆರೆ ತುಂಬಿಸಲು ಪ್ರಾಮಾಣಿಕ ಪ್ರಯತ್ನ: ಡಾ. ರಾಜೇಶ್‌ಗೌಡ

ಸಿರಾ, ನ. ೧೯- ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗುಣವಾಗಿದ್ದು, ಇಡೀ ತಾಲ್ಲೂಕಿನ ಹಾಗೂ ನೆರೆಯ ತಾಲ್ಲೂಕುಗಳ ಅಂತರ್ಜಲವನ್ನು ವೃದ್ಧಿಸುವ ಮದಲೂರು ಕೆರೆಯನ್ನು ಹೇಮಾವತಿಯಿಂದ ತುಂಬಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹೇಳಿದರು.
ಮದಲೂರು ಕೆರೆಯಲ್ಲಿ ಬೆಳೆದಿದ್ದ ನಾಡಜಾಲಿ ಗಿಡಗಳ ಜೆಸಿಬಿ ಮೂಲಕ ತೆರವುಗೊಳಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೆ ನಡೆದ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಬಿಜೆಪಿ ಪಕ್ಷ ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸುವ ಭರವಸೆಯನ್ನು ಚುನಾವಣಾ ಪ್ರಚಾರದ ವೇಳೆ ನೀಡಿತ್ತು. ಅದರಂತೆ ಕೆರೆಯ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ ಎಂದರು.
ಉಪ ಚುನಾವಣೆ ನಡೆದು ಕೇವಲ ಒಂದು ವಾರವೂ ಆಗಿಲ್ಲವಾದರೂ ಮುಖ್ಯಮಂತ್ರಿಗಳು ಮದಲೂರು ಕೆರೆಗೆ ನೀರು ಹರಿಸುವ ಸಂಬಂಧ ಕೆರೆಯ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯು ಕಳೆದ ಎರಡು ದಿನಗಳಿಂದಲೂ ಕೆರೆಯಲ್ಲಿ ಬೆಳೆದ ಹತ್ತಾರು ಎಕರೆಯಷ್ಟು ನಾಡಜಾಲಿ ಗಿಡಗಳನ್ನು ತೆಗೆಯುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದೆ ಎಂದರು.
ಕಳೆದ ೩೦-೪೦ ವರ್ಷಗಳಿಂದಲೂ ಮಳೆಯ ನೀರಿನಿಂದಲೂ ತುಂಬದ ಮದಲೂರು ಕೆರೆಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಇಡೀ ಕೆರೆ ತುಂಬಾ ನಾಡಜಾಲಿ ಗಿಡಗಳು ಬೆಳೆದು ನಿಂತಿವೆ. ಹೇಮಾವತಿ ನೀರನ್ನು ಹರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮದಲೂರು ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಸುಮಾರು ೨೦ ಕ್ಕೂ ಹೆಚ್ಚು ಜೆ.ಸಿ.ಬಿ.ಗಳು ಕೆರೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿವೆ ಎಂದರು.