ಮದಲೂರು ಕೆರೆಗೆ ಶೀಘ್ರ ಹೇಮಾವತಿ ನೀರು

ಸಿರಾ, ನ. ೨೧- ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ಶೀಘ್ರವೇ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲಿದೆ. ಈ ನಿಟ್ಟಿನಲ್ಲಿ ೪೦ ಜೆಸಿಬಿ ಯಂತ್ರ ಬಳಸಿ ಕೆರೆಯಲ್ಲಿ ಹಲವಾರು ವರ್ಷಗಳಿಂದ ಬೆಳೆದು ನಿಂತಿದ್ದ ಸೀಮೆಜಾಲಿ ಗಿಡಗಳ ತೆರವು ಕಾರ್ಯ ಭರದಿಂದ ಸಾಗಿದೆ.
೫೦೮ ಎಕರೆ ವಿಸ್ತ್ರೀರ್ಣದ ಕೆರೆಯ ಆವರಣ ಸ್ವಚ್ಚಗೊಳಿಸಲು ಕಾಲಾವಕಾಶ ಬೇಕಿದೆ. ಸಿರಾ ದೊಡ್ಡಕೆರೆ ಭರ್ತಿಯಾಗಿದ್ದು, ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ನೀರು ನಿರಂತರವಾಗಿ ಹರಿದು ಬರುತ್ತಿದೆ. ಇನ್ನೂ ಸ್ವಲ್ಪ ದಿನಗಳಲ್ಲಿ ಈ ಕೆರೆಯೂ ಕೊಡ ಭರ್ತಿಯಾಗಲಿದ್ದು, ನಂತರ ಮದಲೂರು ಕಾಲುವೆಗೆ ನೀರು ಬಿಡುವಂತ ಮಹತ್ವದ ದಿನಕ್ಕೆ ಸಿರಾ ಕ್ಷೇತ್ರದ ನೀವೆಲ್ಲರೂ ಸಾಕ್ಷಿಯಾಗಲಿದ್ದೀರಿ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹೇಳಿದರು.
ತಾಲ್ಲೂಕಿನ ಮದಲೂರು ಗ್ರಾಮದಲ್ಲಿರುವ ಐತಿಹಾಸಿಕ ಪ್ರಸಿದ್ಧ ಮದಲೂರು ಕೆರೆಯ ಪುನಶ್ಚೇತನ ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಇದೇ ಗ್ರಾಮದಲ್ಲಿ ಸಮಾವೇಶ ನಡೆಸಿ ನೀರು ಹರಿಸುವ ಭರವಸೆ ಫಲಪ್ರದವಾಗಿದ್ದು, ಕೆರೆ ಭರ್ತಿಯಾದ ಮೇಲೆ ಸ್ವತಃ ಮುಖ್ಯಮಂತ್ರಿಗಳೇ ಬಾಗಿನ ಅರ್ಪಿಸಲಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್ ಮಾತನಾಡಿ, ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿಯ ನೂರಾರು ಗ್ರಾಮಗಳ ಜನರ ಕುಡಿಯುವ ನೀರಿನ ದಾಹ ಶಾಶ್ವತವಾಗಿ ನಿವಾರಣೆ ಮಾಡುವಂತ ಸಾಮರ್ಥ್ಯ ಇರುವಂತ ಮದಲೂರು ಕೆರೆ ಭರ್ತಿಯಾದರೆ ಅಂತರ್ಜಲ ಮಟ್ಟ ಸುಧಾರಣೆ ಕಾಣಲಿದ್ದು, ಸಿರಾ ಸುಭಿಕ್ಷೆ ಕಾಣಲಿದೆ ಎಂದರು.
ಈ ಸಂದರ್ಭದಲ್ಲಿ ಸಿರಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ಬಿ.ರಮೇಶ್, ಬಿಜೆಪಿ ಮುಖಂಡರಾದ ನರಸಿಂಹಮೂರ್ತಿ(ಮಾಸ್ಟರ್), ಶ್ರೀರಂಗಯಾದವ್, ಮಾಲಿ ಮರಿಯಪ್ಪ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮದ್ದವಳ್ಳಿ ರಾಮಕೃಷ್ಣ, ತಾ.ಪಂ. ಸದಸ್ಯ ಹುಳಿಗೆರೆ ತಿಮ್ಮಣ್ಣ, ಮಾಲಿಗೌಡ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲಕ್ಷ್ಮಣಗೌಡ ಮತ್ತಿತರರು ಉಪಸ್ಥಿತರಿದ್ದರು.