ಮದಲೂರು ಕೆರೆಗೆ ನೀರು: ರಾಜೇಶ್‌ಗೌಡ ಶ್ರೀಗಳ ಸಲಹೆ

ಸಿರಾ, ನ. ೧೩- ಸಿರಾ ಕ್ಷೇತ್ರದ ಅನ್ನದಾತ ಮತ್ತು ಜನ ಸಾಮಾನ್ಯರ ದಶಕಗಳ ಬೇಡಿಕೆಯಾದ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಮೇಲೆ ಒತ್ತಡ ಹೇರಿ, ಸರ್ಕಾರದಲ್ಲಿ ಆದೇಶ ಮಾಡಿಸಿ ಕೆರೆ ತುಂಬಿಸಿದಾಗ ನೂರಾರು ಗ್ರಾಮಗಳ ಅಂತರ್ಜಲ ಮಟ್ಟ ವೃದ್ಧಿಯಾಗಲಿದ್ದು, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೂರಕಲಿದೆ. ಜನ ಸೇವೆ ಮಾಡಬೇಕೆಂಬ ಇಚ್ಚಾಶಕ್ತಿ ಇದ್ದರೆ ಎಲ್ಲ ಜನಪರ ಕಾರ್ಯಗಳು ಯಶಸ್ವಿಯಾಗಲಿವೆ. ಈ ನಿಟ್ಟಿನಲ್ಲಿ ಹೆಚ್ಚು ಬದ್ಧತೆಯಿಂದ ಕಾರ್ಯೋನ್ಮುಖರಾಗಬೇಕು ಎಂದು ನೂತನ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡರಿಗೆ ಶ್ರೀ ನಂಜಾವಧೂತ ಸ್ವಾಮೀಜಿ ಕಿವಿಮಾತು ಹೇಳಿದರು.
ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀಸ್ಪಟಿಕಪುರಿ ಮಹಾ ಸಂಸ್ಥಾನ ಮಠಕ್ಕೆ ಭೇಟಿ ನೀಡಿದ್ದ ನೂತನ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡರಿಗೆ ಆಶೀರ್ವದಿಸಿ ಅವರು ಮಾತನಾಡಿದರು.
ಸಿರಾ ಕ್ಷೇತ್ರದಲ್ಲಿ ಜನ ಸಾಮಾನ್ಯರ ನಾಡಿ ಮಿಡಿತ ಅರಿತು ಕೆಲಸ ಮಾಡಬೇಕು. ಜನ ಸಾಮಾನ್ಯರ ಕಷ್ಟಗಳಿಗೆ ನಿತ್ಯ ಸ್ಪಂದಿಸುವಂತ ಸೇವೆ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂದರು.
ನೂತನ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಉದ್ದೇಶದಿಂದ ಕಾಲುವೆ ಸ್ವಚ್ಚತೆ ಕಾರ್ಯ ನಡೆಸುವ ಶೀಘ್ರ ಪ್ರಾರಂಭವಾಗಲಿದ್ದು ಅತಿ ಶೀಘ್ರವಾಗಿ ಕೆರೆಗೆ ನೀರು ಹರಿಸುವುದು ನನ್ನ ಪ್ರಥಮ ಅಧ್ಯತೆ. ಅಲ್ಪಾವಧಿಯಲ್ಲಿ ನನಗೆ ಸಿರಾ ಕ್ಷೇತ್ರದ ಜನ ಬಹುದೊಡ್ಡ ಜವಾಬ್ದಾರಿ ನೀಡಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚುತಿ ಬಾರದಂತೆ ಆಭಿವೃದ್ಧಿ ಕಾರ್ಯ ಮಾಡುತ್ತೇನೆ. ಗ್ರಾಮೀಣ ಪ್ರದೇಶದ ರಸ್ತೆಗಳ ಆಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಹೆಚ್ಚು ಕಾಳಜಿ ವಹಿಸುವ ಜತೆಗೆ ಗುಡಿಸಲು ಮುಕ್ತ ಸಿರಾ ಮಾಡುವುದು ನನ್ನ ಗುರಿ. ಹಲವಾರು ದಶಕಗಳಿಂದ ಆಭಿವೃದ್ಧಿ ಕಾಣದ ಗೊಲ್ಲರ ಹಟ್ಟಿಗಳ ಪ್ರಗತಿಗೆ ವಿಶೇಷ ಅನುದಾನ ಕೊಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವಂತ ಕಾರ್ಯ ಮಾಡುತ್ತೇನೆ. ನಿಮ್ಮ ಸೇವಕನಾಗಿ ಕೆಲಸ ಮಾಡಬೇಕೆಂಬ ಸಂಕಲ್ಪ ಹೊಂದಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಲಕ್ಕನಹಳ್ಳಿ ಮಂಜುನಾಥ್, ನಿಡಗಟ್ಟೆ ಚಂದ್ರಶೇಖರ್, ಮುಕುಂದೇಗೌಡ, ಲಿಂಗದಹಳ್ಳಿ ಸುಧಾಕ ಗೌಡ, ಪ್ರಕಾಶ್‌ಗೌಡ, ಸೂಡ ಅಧ್ಯಕ್ಷ ಈರಣ್ಣ, ನಗರಸಭೆ ಮಾಜಿ ಸದಸ್ಯ ನಟರಾಜು, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ರಮೇಶ್, ರಮೇಶ್ ಪಟೇಲ್, ಬಿ.ಹೆಚ್.ಸತೀಶ್ ಮತ್ತಿತರರು ಉಪಸ್ಥಿತರಿದ್ದರು.