ಅಫಜಲಪುರ:ಅ.20: ಇತ್ತೀಚೆಗೆ ಅಕ್ಟೋಬರ್ 13 ರಂದು 11 ಗಂಟೆಯ ಸುಮಾರಿಗೆ ಮದರಾ (ಬಿ) ಗ್ರಾಮ ಪಂಚಾಯತ್ ಅಧ್ಯಕ್ಷ ಗೌಡಪ್ಪಗೌಡ ತಂದೆ ಸಿದ್ದಾರಾಮ ಬಿರಾದಾರ(57) ರವರು ಚವಡಾಪುರ ಗ್ರಾಮದ ಗುಲಬರ್ಗಾ ಗ್ಯಾರೇಜ್ ಹತ್ತಿರ ಅಂತ್ಯ ಸಂಸ್ಕಾರಕ್ಕೆಂದು ಶವ ಸಾಗಿಸುವ ಉಚಾಯಿಗೆ ವೆಲ್ಡಿಂಗ್ ಮಾಡಿಸುವ ಸಂದರ್ಭದಲ್ಲಿ ಬಿರಾದಾರ ಮತ್ತು ಯಂಕಂಚಿ ಕುಟುಂಬದ ಮಧ್ಯೆ ಇದ್ದ ಹಳೆಯ ವೈಷಮ್ಯದ ಹಿನ್ನೆಲೆ ಗೌಡಪ್ಪಗೌಡ ಬಿರಾದಾರ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹೊಡೆದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪಿಗಳು ತಲೆಮರೆಸಿಕೊಂಡು ಪರಾರಿಯಾಗಿದ್ದರು.
ಮೃತರ ಸಂಬಂಧಿ ದತ್ತು ತಂದೆ ಶಿವಯೋಗೆಪ್ಪ ಬಿರಾದಾರ ರವರು ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ದೇವಲ ಗಾಣಗಾಪುರ ಪೊಲೀಸರು ಆರೋಪಿಗಳನ್ನು ತ್ವರಿತಗತಿಯಲ್ಲಿ ಬಂಧಿಸುವ ಮೂಲಕ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿತರ ಪತ್ತೆಗಾಗಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸಿ.ಪಿ.ಐ ಪಂಡಿತ ಸಗರ್ ನೇತೃತ್ವದ ತಂಡದಲ್ಲಿ ಪಿ.ಎಸ್.ಐ ಗಳಾದ ರಾಹುಲ ಪವಾಡೆ, ಮಡಿವಾಳಪ್ಪ ಬಾಗೋಡಿ, ಸಿದ್ದೇಶ್ವರ ಗರಡೆ ಸಿಬ್ಬಂದಿಗಳಾದ ಆನಂದ, ಯಲ್ಲಾಲಿಂಗ ಬಜಂತ್ರಿ, ಮಲ್ಲಿಕಾರ್ಜುನ, ಸಂಗಣ್ಣ, ಶಿವು ಕಲ್ಲೂರ, ಪ್ರದೀಪ, ಶಿವಲಿಂಗ ಅವರನ್ನೊಳಗೊಂಡ ತಂಡವು ಕೊಲೆ ಮಾಡಿದ ಮದರಾ (ಬಿ) ಗ್ರಾಮದ ಆರೋಪಿತರಾದ ಗುರುಭೀಮ ತಂದೆ ಬಸಣ್ಣ ಯಂಕಂಚಿ, ದತ್ತಾತ್ರೇಯ ತಂದೆ ಗುರುಭೀಮ ಯಂಕಂಚಿ, ನಿಂಗಣ್ಣ ತಂದೆ ಈರಣ್ಣ ಯಂಕಂಚಿ, ಪ್ರಜ್ವಲ ತಂದೆ ಪರಮಾನಂದ ಘತ್ತರಗಿ, ಪುಂಡಲಿಂಗ ತಂದೆ ಮಹಾಂತಪ್ಪ ಯಂಕಂಚಿ ಎಂಬ 5 ಜನ ಆರೋಪಿತರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ 2 ಬೊಲೆರೊ ವಾಹನ, 2 ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಪಡಿಸಿಕೊಂಡ ಪೊಲೀಸರು ಅಕ್ಟೋಬರ್. 19 ರಂದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಕೇವಲ ವಾರದಲ್ಲಿ ಎಲ್ಲ ಆರೋಪಿತರನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸರ ಕರ್ತವ್ಯಕ್ಕೆ ಕಲಬುರಗಿ ಎಸ್.ಪಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಎಸ್.ಪಿ ಎನ್. ಶ್ರೀನಿಧಿ, ಡಿ.ವೈಎಸ್.ಪಿ ಗೋಪಿ ಬಿ.ಆರ್ ಶ್ಲಾಘಿಸಿದ್ದಾರೆ.