ಮದಗುಣಕಿ ರೈತರ ಎಂಟು ಎಕರೆ ಕಬ್ಬಿನ ಗದ್ದೆ ಸುಟ್ಟು ಹಾನಿ

ಆಳಂದ:ನ.24: ಬೆಳೆದು ಕಟಾವಿಗೆ ಬಂದ ಕಬ್ಬಿನ ಗದ್ದೆಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಯ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ಹತ್ತಿಕೊಂಡು ಇಬ್ಬರು ರೈತರ ತಲಾ 4 ಎಕರೆ ಹೀಗೆ ಒಟ್ಟು 8 ಎಕರೆ ಕಬ್ಬು ಸುಟ್ಟು ಹಾನಿಯಾದ ಘಟನೆ ಮಾದನಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯ ಮದಗುಣಕಿ ಗ್ರಾಮದಿಂದ ವರದಿಯಾಗಿದೆ.

ಗ್ರಾಮದ ಸಿದ್ಧಪ್ಪ ಭೀಮಶಾ ಪಡಶೆಟ್ಟಿ ಸೇರಿದ ನಾಲ್ಕು ಎಕರೆ ಕಬ್ಬು ಹಾಗೂ ಸುರೇಶ ಶಿವಯೋಗಪ್ಪ ಮಾಳಗೆ ಅವರ ನಾಲ್ಕು ಎಕರೆ ಹೀಗೆ ಒಟ್ಟು ಎಂಟು ಎಕರೆ ಕಬ್ಬಿಗೆ ಬೆಂಕಿತಲು ಲಕ್ಷಾಂತ ರೂಪಾಯಿ ಹಾನಿಯಾಗಿದೆ.

ಬೆಂಕಿಹತ್ತಿಕೊಂಡಾಗ ಹೊಲದಲ್ಲಿದ್ದ ರೈತರು ಮತ್ತು ನೆರೆಹೊರೆಯವರು ಸೇರಿ ನಂದಿಸಲು ಹರಸಹಾಸ ಪಟ್ಟರು. ಅಲ್ಲದೆ, ಅಗ್ನಿಶ್ಯಾಮಕ ಠಾಣೆಗೆ ಕರೆ ಮಾಡಲಾಗಿತ್ತು.

ಅಗ್ನಿಶ್ಯಾಮಕ ದಳ ಸಿಬ್ಬಂದಿಗಳು ವಾಹನದೊಂದಿಗೆ ಸ್ಥಳಕ್ಕೆ ಬರುವಷ್ಟರಲ್ಲೇ ಸಂಪೂರ್ಣವಾಗಿ ಕಬ್ಬು ಬೆಂಕಿಗಾಹುತಿಯಾಗಿದೆ ಎಂದು ಪ್ರತ್ಯೇಕ್ಷದರ್ಶಿಗಳು ಹೇಳಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೇಖಪಾಲಕ ಸುಭಾಷ ಪಾಟೀಲ ಹಾನಿಯ ಕುರಿತು ಸರ್ವೇ ನಡೆಸಿದರು. ಜೆಸ್ಕಾಂ ಲೈನ್‍ಮ್ಯಾನ್ ಶ್ರೀಮಂತ ಹಾಗೂ ಮಾದನಹಿಪ್ಪರಗಾ ಠಾಣೆಯ ಸಿಬ್ಬಂದಿಗಳು ಪರಿಶೀಲಿಸಿದರು. ಈ ಕುರಿತು ಮಾದಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ತಂತಿ ಪರಸ್ಪರ ಸ್ಪರ್ಶದಿಂದ ಉಂಟಾದ ಬೆಂಕಿಯಿಂದ ಹಾನಿಯಾದ ಕಬ್ಬಿನ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಅಳಿದುಳಿದ ಕಬ್ಬನ್ನು ಸಕ್ಕರೆ ಕಾರ್ಖಾನೆಯವರು ಕೂಡಲೇ ಪಡೆದುಕೊಳ್ಳಬೇಕು ಎಂದು ಕರವೇ ಜಿಲ್ಲಾ ಸಂಚಾಲಕ ಮಹಾಂತೇಶ ಸಣ್ಣಮನಿ ಅವರು ಒತ್ತಾಯಿಸಿದ್ದಾರೆ.