ಮತ ಬಹಿಷ್ಕಾರಕ್ಕೆ ಮುಂದಾದ ಜನರನ್ನು ಮನವೊಲಿಸಿದ ಅಧಿಕಾರಿಗಳು.


ಸಂಜೆವಾಣಿ ವಾರ್ತೆ
ಸಿರಿಗೇರಿ ಮೇ 9. ಗ್ರಾಮದ 2ನೇ ವಾರ್ಡಿನ ಬಸವನಪೇಟೆ ಪ್ರದೇಶದ ಸುಮಾರು ನೂರಕ್ಕೂ ಹೆಚ್ಚು ಕುಟುಂಬದ  ನಿವಾಸಿಗಳು, ತಮ್ಮ ನಿವೇಶನಗಳನ್ನು ಮತ್ತು ವಾಸದ ಮನೆಗಳನ್ನು ಗ್ರಾಮ ಪಂಚಾಯಿತಿ ಆಡಳಿತದ ವ್ಯಾಪ್ತಿಯಲ್ಲಿ ಸೇರಿಸಿಕೊಂಡಿದ್ದರು, ಈ ಹಿಂದೆ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಮಾರಾಟ ಮಾಡಿದ ಮಾಲೀಕರ ಕುಟುಂಬದ ವ್ಯಕ್ತಿಯು, ತಮ್ಮ ಜಮೀನನ್ನು ಬಿಟ್ಟು ಕೊಡುವಂತೆ ಒತ್ತಾಯಿಸಿ ನಿವಾಸಿಗಳಿಗೆ ತೊಂದರೆ ಮಾಡುತ್ತಿದ್ದಾರೆಂದು, ತಮಗೆ ನ್ಯಾಯ ಒದಗಿಸುವವರೆಗೆ ನಾವು ಚುನಾವಣೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಮತ ಬಹಿಷ್ಕಾರ ಮಾಡುವುದಾಗಿ ನಿರ್ಣಯ ಕೈಗೊಂಡಿರುವಾಗಿ ಇಂದು ಬಸವನಪೇಟೆ ಪ್ರದೇಶದಲ್ಲಿ, ಪ್ರತಿಭಟನೆ ಮಾಡಿದ ಘಟನೆ  ನಡೆಯಿತು. ಈಗಾಗಲೇ 20 ವರ್ಷಗಳಿಗೂ ಮುಂಚೆ ತಾವುಗಳು ನಿವೇಶನಗಳನ್ನು ಖರೀದಿಸಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಜಮೀನು ಮಾಲೀಕರಿಂದ ಖರೀದಿ ಮಾಡಿದ ಕರಾರು ಪತ್ರಗಳನ್ನು ಹೊಂದಿ, ಗ್ರಾಮ ಪಂಚಾಯಿತಿ ಡಿಮ್ಯಾಂಡಿನಲ್ಲಿ ಸೇರ್ಪಡೆ ಮಾಡಿಸಿಕೊಂಡು, ಕೆಲವರು  ಸರ್ಕಾರದ ಆಶ್ರಯ ಮನೆಗಳನ್ನು ಕಟ್ಟಿಸಿಕೊಂಡಿದ್ದೇವೆ, ಈಗ ಕಳೆದ ನಾಲ್ಕೈದು ತಿಂಗಳಿನಿಂದ ಜಮೀನಿನ ಮಾಲೀಕರಿಗೆ ಸಂಬಂಧಪಟ್ಟವರು ಎನ್ನಲಾದ ವ್ಯಕ್ತಿಯು ತಮ್ಮ ಜಮೀನನ್ನು ಬಿಟ್ಟು ಕೊಡುವಂತೆ ಒತಾಯಿಸುತ್ತಿದ್ದು ಸಮಸ್ಯೆ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ನಾವುಗಳು ಕಾನೂನು ಮೊರೆ  ಹೋಗಿ ನಮ್ಮ ಆಸ್ತೀಗಳನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ವ್ಯಾಜ್ಯ ನಡೆಯುತ್ತಿದ್ದ ಈ ಮಧ್ಯೆ ಈ  ವ್ಯಕ್ತಿಯು  ಈ ಜಮೀನನ್ನು ಇನ್ನೋರ್ವ ಹಳ್ಳಿಮರದ ವೀರೇಶ ಎಂಬ ವ್ಯಕ್ತಿಗೆ ನಮ್ಮ ಮನೆಗಳು ಇರುವ ಸರ್ವೇ ನಂಬರ್ 438. ವಿಸ್ತೀರ್ಣ 5ಎಕರೆ, 80ಸೆಂಟ್ಸ್  ಮಾರಾಟ ಮಾಡಿ ಅವರ ಹೆಸರಿಗೆ ಪಹಣಿ ದಾಖಲೆ ಬಂದಿರುವದು ನಮಗೆ ಮಾಹಿತಿ ಸಿಕ್ಕಿದೆ. ಈಗ ಆ ವ್ಯಕ್ತಿಯು ಬಂದು ನಮ್ಮನ್ನು ಜಾಗ ಬಿಡಿಸುವ ಆತಂಕವನ್ನು ಎದುರಿಸುತ್ತಿದ್ದೇವೆ. ನಮಗೆ ನ್ಯಾಯ ಕೊಡಿಸುವವರೆಗೆ ನಾವು ಮತ ಚಲಾವಣೆ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ವಿಷಯವನ್ನು ತಿಳಿಸಿದರು. ಇದನ್ನು ಅರಿತ ಸ್ಥಳೀಯ  ಗ್ರಾಮ ಪಂಚಾಯಿತಿ ಪಿಡಿಓ ಶಿವಕುಮಾರ್ ಕೋರಿ ಇವರು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ, ನಾಳೆ ನಡೆಯಲಿರುವ ಮತದಾನದ ಪವಿತ್ರ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಿ ಮತದಾನ ಮಾಡಿ ನಂತರ ಈ ಸಮಸ್ಯೆಯನ್ನು ಮೇಲಾಧಿಕಾರಿಗಳ ಸಹಕಾರದಿಂದ ಪರಿಹರಿಸಲಾಗುವುದು ಎಂದು ಇಲ್ಲಿನ ಬಸವನಪೇಟೆ ನಿವಾಸಿಗಳ ಮನವೊಲಿಸಲು ಪ್ರಯತ್ನ ಮಾಡಿದರು. ಸಂಬಂಧಿಸಿದ ಮೇಲಾಧಿಕಾರಿಗಳು ಬಂದು ನಮಗೆ ಪೂರ್ಣ ಭರವಸೆ ನೀಡುವವರೆಗೆ ನಾವು ಮತ ಚಲಾಯಿಸುವುದಿಲ್ಲ ಎಂದು ಪಟ್ಟು ಹಿಡಿದರು. ಮಧ್ಯಾಹ್ನದ ನಂತರ  ಚುನಾವಣೆ ಮತ್ತು ಘಟನೆ ಸಂಭಂದಿಸಿದ ಮೇಲಾಧಿಕಾರಿಗಳು  ಬಂದು ಈ ನಿವಾಸಿಗಳ ಮನವೊಲಿಸುವ ಕಾರ್ಯ ಮುಂದುವರಿಯಲಿದೆ ಎಂದು ಮಾಹಿತಿ ತಿಳಿದುಬಂದಿದೆ.