
ಕಲಬುರಗಿ,ಮೇ.12:ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯು ಇದೇ ಮೇ 13 (ಶನಿವಾರ) ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿನ ಸುಗಮ ಸಂಚಾರ ಮತ್ತು ಸಾರ್ವಜನಿಕರ ಅನುಕೂಲ ದೃಷ್ಠಿಯಿಂದ ವಾಹನ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಗಮನ ಹರಿಸಬೇಕೆಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ ಕುಮಾರ ತಿಳಿಸಿದ್ದಾರೆ.
ಸೇಡಂ ಕಡೆಯಿಂದ ಬರುವ ಭಾರಿ ವಾಹನಗಳು ಸಣ್ಣೂರ ಕ್ರಾಸ್ ಮುಖಾಂತರ ಭಂಕೂರ ಕ್ರಾಸ್ ಮಾರ್ಗವಾಗಿ ಸಾಗುವುದು. ಹುಮನಾಬಾದ ಕಡೆಯಿಂದ ಬರುವ ಭಾರಿ ವಾಹನ ಸವಾರರು ತಾವರಗೇರಾ ಕ್ರಾಸ್‍ದಿಂದ ಎಡಕ್ಕೆ ತಿರುಗಿ ತಾವರಗೇರಾ, ಕೇರೂರ, ಹರಸೂರ, ಸಾಥಖೇಡ, ಟೆಂಗಳಿ ಕ್ರಾಸ್ ಮುಖಾಂತರ ಸಾಗುವುದು. ಹುಮನಾಬಾದ ಕಡೆಯಿಂದ ಬರುವ ಇತರೆ ವಾಹನಗಳು ಹುಮನಾಬಾದ ರಿಂಗ ರೋಡ್ ಮುಖಾಂತರ ಆಳಂದ ರಿಂಗ ರೋಡ್, ಹೀರಾಪೂರ ವೃತ್ತ, ಹೈಕೋರ್ಟ್ ಮಾರ್ಗವಾಗಿ ಸಂಚರಿಸುವುದು.
ಜೇವರ್ಗಿ, ಅಫಜಲಪೂರ ಕಡೆಯಿಂದ ಬರುವ ವಾಹನಗಳು ಹೀರಾಪೂರ ವೃತ್ತ ಮುಖಾಂತರ ಆಳಂದ ರಿಂಗ್ ರೋಡ್‍ಗೆ ಬರುವುದು. ಆಳಂದ ಕಡೆಯಿಂದ ಬರುವ ವಾಹನಗಳು ಆಳಂದ ರಿಂಗ್ ರೋಡ್ ಮುಖಾಂತರ ಹೀರಾಪೂರ ಕ್ರಾಸ್ ಮುಖಾಂತರ ಸಾಗುವುದು. ರಾಮ ಮಂದಿರ, ನಾಗನಹಳ್ಳಿ ರಿಂಗ್ ರೋಡ್ ಕಡೆಯಿಂದ ಬರುವ ಭಾರಿ ವಾಹನಗಳು ಶಹಾಬಾದ ರೋಡ್ ಮುಖಾಂತರ ಸಾಗುವುದು. ಕುಸನೂರ ಕಡೆಯಿಂದ ಬರುವ ವಾಹನಗಳು ಕುಸನೂರ, ಬುದ್ಧ ವಿಹಾರ ಗೇಟ್ ಮುಖಾಂತರ ಸೇಡಂ ರೋಡ್ ಕಡೆಗೆ ಸಾಗುವುದು.
ಪಾರ್ಕಿಂಗ್ ಸ್ಥಳ: ಜಿಲ್ಲೆಯ ವಿವಿಧ ತಾಲೂಕಿನಿಂದ ಬರುವ ವಾಹನಗಳ ಪಾರ್ಕಿಂಗ್‍ಗೆ ಸ್ಥಳ ನಿಗದಿ ಮಾಡಲಾಗಿದ್ದು, ಆಳಂದ, ಗುಲಬರ್ಗಾ ನಗರ ಮತ್ತು ಗುಲಬರ್ಗಾ ಗ್ರಾಮೀಣ ಕ್ಷೇತ್ರದ ವಾಹನಗಳು ಸೇಡಂ ರಸ್ತೆಯಲ್ಲಿರುವ ಸಿದ್ಧಿಪ್ರಿಯಾ ಹೋಟೆಲ್ ಹಿಂದುಗಡೆ ಇರುವ ಬಯಲು ಪ್ರದೇಶದಲ್ಲಿ ಮತ್ತು ಹಿಂಗುಲಾಂಬಿಕಾ ಕಾಲೇಜು ಆವರಣದಲ್ಲಿ ಪಾರ್ಕಿಂಗ್ ಮಾಡುವುದು. ಸೇಡಂ, ಚಿತ್ತಾಪುರ, ಚಿಂಚೋಳಿ ಕ್ಷೇತ್ರದ ವಾಹನಗಳು ಆಜಾದಪೂರ ಕ್ರಾಸ್ ಹತ್ತಿರ ಇರುವ ಬಯಲು ಪ್ರದೇಶದಲ್ಲಿ ಹಾಗೂ ಶಹಾಬಾದ, ಜೇವರ್ಗಿ, ಅಫಜಲಪೂರ ಕ್ಷೇತ್ರದ ವಾಹನಗಳು ಕುಸನೂರ ರೋಡ ಪ್ರೆಸ್ ಕ್ಲಬ್ ಹತ್ತಿರವಿರುವ ಬಯಲು ಪ್ರದೇಶದಲ್ಲಿ ಪಾರ್ಕಿಂಗ್ ಮಾಡುವುದು.