ಮತ ಎಣಿಕೆ ಹಿನ್ನೆಲೆ:ಪೋಸ್ಟಲ್ ಬ್ಯಾಲೆಟ್ ಎಣಿಕೆ‌ ಅಧಿಕಾರಿ-ಸಿಬ್ಬಂದಿಗಳಿಗೆ ತರಬೇತಿ

ಕಲಬುರಗಿ:ಜೂ.1: ಲೋಕಸಭೆ ಚುನಾವಣೆಯ ಮತ ಎಣಿಕೆ ಇದೇ ಜೂನ್ 4 ರಂದು ಗುಲಬರ್ಗಾ ವಿ.ವಿ.ಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ಕಲಬುರಗಿ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಪೋಸ್ಟಲ್ ಬ್ಯಾಲೆಟ್ ಮತ ಎಣಿಕೆಗೆ ನಿಯೋಜಿಸಿದ ಅಧಿಕಾರಿ-ಸಿಬ್ಬಂದಿಗಳಿಗೆ ತರಬೇತಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ತರಬೇತಿ ಕಾರ್ಯ ಉದ್ದೇಶಿಸಿ ಮಾತನಾಡಿದ ಚುನಾವಣಾಧಿಕಾರಿ ಬಿ‌.ಫೌಜಿಯಾ ತರನ್ನುಮ್ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ತುಂಬಾ ಎಚ್ಚರಿಕೆಯಿಂದ ಎಣಿಕೆ ಕಾರ್ಯ ನಿರ್ವಹಿಸಬೇಕು. ಪ್ರತಿ ಮತ ಪತ್ರವನ್ನು ಏಜೆಂಟ್ ಗಳಿಗೆ ತೋರಿಸಿಯೇ ಟ್ರೇ ನಲ್ಲಿ ಹಾಕಬೇಕು. ಸಿಂಧು-ಅಸಿಂಧು ಗೊಮದಲವಿದ್ದಲ್ಲಿ ಪೋಸ್ಟಲ್ ಬ್ಯಾಲೆಟ್ ಬಗ್ಗೆ ಸಂಶಯ ಬಂದಲ್ಲಿ ಸಂಶಾಯಾಸ್ಪದ ಮತ ಎಂದು ಪ್ರತ್ಯೇಕವಾಗಿ ತೆಗೆದಿರಿಸಬೇಕು ಎಂದರು.

ಅಂಚೆ, ಇ.ಟಿ.ಪಿ.ಬಿ‌.ಎಸ್ ಮತ ಎಣಿಕೆಗೆ ಚುನಾವಣಾಧಿಕಾರಿಗಳ ಸಮಕ್ಷಮದಲ್ಲಿ ಒಟ್ಟಾರೆ 8 ಟೇಬಲ್ ಹಾಕಲಾಗುತ್ತಿದೆ. ಪ್ರತಿ ಟೇಬಲ್ ಗೆ ಓರ್ವ ಎಣಿಕೆ ಸೂಪರವೈಸರ್, ಇಬ್ಬರು ಸಹಾಯಕರು, ಓರ್ವ ಮೈಕ್ರೋ ವೀಕ್ಷಕರು ಹಾಗೂ ಓರ್ವ ಸಹಾಯಕ‌ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗುತ್ತದೆ ಎಂದರು.

ನ್ಯಾಷನಲ್ ಲೇವಲ್ ಮಾಸ್ಟರ್ ಟ್ರೇನರ್ ಡಾ.ಶಶಿಶೇಖರ ರೆಡ್ಡಿ ಅವರು ಪೋಸ್ಟಲ್ ಬ್ಯಾಲೆಟ್ ಮತ ಎಣಿಕೆ ಪ್ರಕ್ರಿಯೆ ಕುರಿತು ಸವಿಸ್ತಾರವಾಗಿ‌ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ ಇದ್ದರು.