ಮತ ಎಣಿಕೆ ಮುಂದೂಡಿಕೆಗೆ ಸುಪ್ರೀಂ ಸೂಚನೆ

ನವದೆಹಲಿ, ಮೇ.೧- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆಯ ನಿತ್ಯ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಎಣಿಕೆ ಯನ್ನು ಮುಂದೂಡುವಂತೆ ಉತ್ತರ ಪ್ರದೇಶದ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಎಂದು ಸೂಚನೆ ನೀಡಿದೆ.

ದಿನ ನಿತ್ಯ ಸೋಂಕು ಹೆಚ್ಚಳವಾಗುತ್ತಿರುವ ರೀತಿಯನ್ನು ಗಮನಿಸಿದರೆ, ಸದ್ಯಕ್ಕೆ ದೇಶದಲ್ಲಿ ಸೋಂಕು ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳು ಕಡಿಮೆ. ಹೀಗಾಗಿ ನಾಳೆ ನಡೆಯಲಿರುವ ಮತಎಣಿಕೆ ಯನ್ನು ಸದ್ಯದ ಮಟ್ಟಿಗೆ ಮುಂದೂಡಿ ಎಂದು ಸೂಚಿಸಿದೆ.

ಸದ್ಯ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಣೆಯಾಗುವ ತನಕ ಕನಿಷ್ಠ ಎರಡು -ಮೂರು ವಾರಗಳ ತನಕವಾದರೂ ಮತಎಣಿಕೆಯ ಮುಂದೂಡಿ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಮಾಡದಂತೆ ಸಚಿನ್ ಯಾದವ್ ಎನ್ನುವವರು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು.ಆದರೆ ಹೈಕೋರ್ಟ್ ಮತಎಣಿಕೆಗೆ ಅವಕಾಶ ಮಾಡಿಕೊಟ್ಟಿತ್ತು.
ಈ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಮನವಿ ಮಾಡಲಾಗಿತ್ತು.

ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಜನರ ಆರೋಗ್ಯದ ಹಿತದೃಷ್ಟಿಯಿಂದ ಸದ್ಯದ ಪರಿಸ್ಥಿತಿ ತಿಳಿಯಾಗುವ ವರೆಗೂ ಮತಎಣಿಕೆ ಯನ್ನು ಮುಂದೂಡಿ ಎಂದು ಸೂಚನೆ ನೀಡಿದೆ. ಅಲ್ಲದೆ ಯಾವೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೀರಿ ಎನ್ನುವ ಕುರಿತು ಮಾಹಿತಿ ನೀಡಿ ಎಂದು ಸೂಚನೆ ನೀಡಿದೆ.

ಸದ್ಯದ ಪರಿಸ್ಥಿತಿಯಲ್ಲಿ ಚುನಾವಣಾ ಕರ್ತವ್ಯಕ್ಕೆ ತೆರಳಲು ಸಾಧ್ಯವಿಲ್ಲ ಎಂದು ಕೂಡ ಶಿಕ್ಷಕರ ಸಂಘ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಈ ಸಂಬಂಧ ಪ್ರತಿಕ್ರಿಯಿಸಿರುವ ರಾಜ್ಯ ಚುನಾವಣಾ ಆಯೋಗ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂಕೋರ್ಟಿಗೆ ತಿಳಿಸಿದೆ.