ಮತ ಎಣಿಕೆ ನಿರಾತಂಕ ಸಂಪನ್ನ

ಬ್ಯಾಡಗಿ, ಡಿ 31- ಮತಪತ್ರಗಳಲ್ಲಿ ನೋಟು ಪ್ರತ್ಯಕ್ಷ್ಯವಾಗಿದ್ದು ಸೇರಿದಂತೆ, ಮೂರು ಮತಗಳೊಂದಿಗೆ ಅತ್ತೆಯನ್ನು ಹಿಂದಿಕ್ಕಿದ ಸೊಸೆ ಇನ್ನಿತರ ಕುತೂಹಲಕಾರಿ ಅಂಶಗಳೊಂದಿಗೆ ಗ್ರಾಮ ಪಂಚಾಯತ್ ಚುನಾವಣೆಯ ಮತಎಣಿಕೆ ಕಾರ್ಯವು ಪಟ್ಟ ಣದ ಸೇಂಟ್ ಜಾನ್ ವಿಯೆನ್ನಾ ಸ್ಕೂಲ್ ಆವರಣದಲ್ಲಿ ಬಿಗಿ ಭದ್ರತೆ ನಡುವೆ ನಿರಾತಂಕವಾಗಿ ಸಂಪನ್ನಗೊಂಡಿತು.
ತಹಶೀಲ್ದಾರ ರವಿ ಕೊರವರ ನೇತೃತ್ವದಲ್ಲಿ ನಡೆದ ಮತ ಏಣಿಕೆ ಕಾರ್ಯವು ನಿಗದಿತ ಅವಧಿಗೆ ಪ್ರಾರಂಭವಾಗಿತಾದರೂ ಸಂಜೆಯವರೆಗೂ ಕೇವಲ ಚಿಕ್ಕಬಾಸೂರ, ಮಾಸಣಗಿ, ಕಲ್ಲೇದೇವರ, ಶಿಡೇನೂರ, ಬನ್ನಿಹಟ್ಟಿ, ಹಿರೇಅಣಜಿ ಸೇರಿದಂತೆ ಒಟ್ಟು 6 ಗ್ರಾಮ ಪಂಚಾಯತ್‍ಗಳ ವಿಜೇತರ ಫಲಿತಾಂಶವಷ್ಟೇ ಪ್ರಕಟಗೊಳ್ಳಲು ಸಾಧ್ಯವಾಯಿತು.
ಬಿಜೆಪಿ ಬೆಂಬಲಿತರು ಮೇಲುಗೈ:ಪ್ರಕಟವಾದ 6 ಗ್ರಾಪಂ.ಗಳಲ್ಲಿ ಹಾಗೂ 4 ರಲ್ಲಿ ಬಿಜೆಪಿ ಬೆಂಬಲಿತರು ಹಾಗೂ 2 ರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ವಿಜಯಿಶಾಲಿಗಳಾಗಿದ್ದಾರೆ, ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಶಿಡೇನೂರಿನಲ್ಲಿಯೂ ಈ ಬಾರಿ ಬಿಜೆಪಿ ಜಯಭೇರಿ ಬಾರಿಸಿದೆ.
ನೋಟು ಪ್ರತ್ಯಕ್ಷ:ತಾಲೂಕಿನ ಶಿಡೇನೂರ ಗ್ರಾಪಂ.ಹಲವಾರು ಕುತೂಹಲಕಾರಿ ಅಂಶಗಳಿಗೆ ಸಾಕ್ಷಿಯಾಯಿತು, ವಾರ್ಡ ಸಂಖ್ಯೆ 2 ರಲ್ಲಿ ಎರಡು ಮತಪತ್ರಗಳಲ್ಲಿ ರೂ.10 ಹಾಗೂ 20 ರೂ.ಗಳನ್ನಿಟ್ಟು ಮತದಾನ ಮಾಡಿದ್ದು ಬೆಳಕಿಗೆ ಬಂದಿದೆ, ಮತಪತ್ರಕ್ಕೆ ಪಿನ್ ಹಾಕಿ ನೋಟುಗಳನ್ನು ಅಂಟಿಸಲಾಗಿತ್ತು, ಬಳಿಕ ಪರಿಶೀಲಿಸಿದ ಚುನಾವಣಾಧಿಕಾರಿಗಳು ಎರಡೂ ಮತ ಗಳನ್ನು ತಿರಿಸ್ಕರಿಸಿದರು.
ಅತ್ತೆಯನ್ನು ಹಿಂದಿಕ್ಕಿದ ಸೊಸೆ:ಕೇವಲ 3 ಮತಗಳ ಅಂತರದಲ್ಲಿ ಸೊಸೆ ಅಶ್ವಿನಿ ಕಿತ್ತೂರ ಅತ್ತೆ ಅಂಜನಾದೇವಿ ಕಿತ್ತೂರ ಇವರನ್ನು ಹಿಂದಿಕ್ಕಿ ವಿಜಯ ಸಾಧಿಸಿದ ಘಟನೆ ನಡೆದಿದೆ, ಅಂತಿಮ ಕ್ಷಣದವರೆಗೂ ಜಿದ್ದಾಜಿದ್ದಿನ ಪೈಪೋಟಿ ಕಂಡು ಎಣಿಕೆ ಕಾರ್ಯ ಪೂರ್ಣಗೊಂಡಾಗ ಕೇವಲ ಒಂದು ಮತ ಮುನ್ನಡೆ ಪಡೆದಿದ್ದ ಸೊಸೆ ಅಶ್ವಿನಿ ಅಂತಿಮವಾಗಿ 2 ಅಂಚೆ ಮತಗಳನ್ನು ಪಡೆದು 3 ಮತಗಳ ಅಂತರದೊಂದಿಗೆ ಜಯ ಸಾಧಿಸಿದರು.
ವಿಜಯೋತ್ಸವ:ಇತ್ತ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ವಿಜೇತ ಸದಸ್ಯರು ವಿಜಯೋತ್ಸವ ಆಚರಿಸಿದರು. ಮೆರವಣಿಗೆಯನ್ನು ನಿಷೇಧಿಸಿದ್ದರೂ ಸಹ ಪೋಲಿಸರ ಒಬ್ಬರಿಗೊಬ್ಬರೂ ಬಣ್ಣ ಎರಚುವ ಮೂಲಕ ಸಂಭ್ರಮಿಸಿದರು.
ಗ್ರಾಮಗಳಲ್ಲೂ ಮೆರವಣಿಗೆ:ಫಲಿತಾಂಶ ಹೊರಬಿದ್ದ ಸದಸ್ಯರು ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಮೆರವಣಿಗೆ ನಡೆಸುವ ಮೂಲಕ ಸಿಹಿ ಹಂಚಿ ಸಂಭ್ರಮಿಸಿದರು.