ಮತ ಎಣಿಕೆ ಗೋಲ್‌ಮಾಲ್ ಟ್ರಂಪ್ ಆರೋಪ


ವಾಷಿಂಗ್ಟನ್, ನ. ೬- ಡೆಮಾಕ್ರಟಿಕ್ ಪಕ್ಷದವರು ಚುನಾವಣೆಯನ್ನೇ ಕಳವು ಮಾಡಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ.

ನ್ಯಾಯಯುತವಾದ ಮತಗಳ ಎಣಿಕೆ ನಡೆದರೆ ನಾನು ಗೆದ್ದೇ ಗೆಲ್ಲಬೇಕು ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದು ಸದ್ಯದ ಪರಿಸ್ಥಿತಿಯಲ್ಲಿ ಡೆಮಾಕ್ರಟಿಕ್ ಗಳು ಚುನಾವಣೆಯನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಯುತವಾದ ಮತಗಳನ್ನು ಲೆಕ್ಕಹಾಕಿದರೆ ನಾನು ಸುಲಭವಾಗಿ ಗೆಲ್ಲುತ್ತೇನೆ ಆದರೆ ಅಕ್ರಮ ಮತಗಳನ್ನು ಲೆಕ್ಕ ಹಾಕಿದರೆ ಅದು ಕಷ್ಟಸಾಧ್ಯವೆಂದು ಹೇಳಿದ್ದಾರೆ.

ರಿಪಬ್ಲಿಕನ್ ಪಕ್ಷದ ಹಿಡಿತವಿರುವ ರಾಜ್ಯಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದೇನೆ. ಆದರೆ ಡೆಮಾಕ್ರಟಿಕ್ ಕುತಂತ್ರದಿಂದಾಗಿ ಹಿನ್ನೆಡೆ ಕಾಯ್ದುಕೊಳ್ಳಲಾಗಿದೆ. ಅನೇಕ ನಿರ್ಣಾಯಕ ರಾಜ್ಯಗಳಲ್ಲಿ ನಾನು ಈಗಾಗಲೇ ಗೆಲುವು ಸಾಧಿಸಿದ್ದೇನೆ ಎಂದಿದ್ದಾರೆ.

ಪ್ರಮುಖವಾಗಿ ಫ್ಲಾರಿಡಾ, ಲೋವಾ, ಇಂಡಿಯಾನಾ,ಒಹಿಯೊ ಸಂತೆ ಪ್ರಮುಖ ರಾಜ್ಯಗಳಲ್ಲಿ ಜಯಭೇರಿ ಬಾರಿಸಿದೆ ಅನೇಕ ಅಡೆತಡೆಗಳ ನಡುವೆಯೂ ನಾವು ಐತಿಹಾಸಿಕ ಜಯ ಸಾಧಿಸಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡೆಮಾಕ್ರಟಿಕ್ ಪರ ಅಲೆ ಇಲ್ಲ:

ಸಮೀಕ್ಷೆಗಳು ಹೇಳುವ ರೀತಿ ಅಮೆರಿಕ ಅಧ್ಯಕ್ಷ ಚುನಾವಣೆ ಯಲ್ಲಿ ಡೆಮಾಕ್ರಟಿಕ್ ಪಕ್ಷದ ಪರವಾಗಿ ಅಲೆ ಇಲ್ಲ. ಬದಲಾಗಿ ರಿಪಬ್ಲಿಕನ್ ಪಕ್ಷದ ಪರ ಅಲೆ ಇದೆ ಎಂದು ಅವರು ತಿಳಿಸಿದ್ದಾರೆ.

ಡೆಮಾಕ್ರಟಿಕ್ ಪಕ್ಷ ದೊಡ್ಡ ದಾನಿಗಳು, ತಂತ್ರಜ್ಞಾನಿಗಳು, ಉದ್ಯಮಿಗಳು ಮತ್ತು ಸಿರಿವಂತರಿಗೆ ಸೇರಿದ್ದಾಗಿದೆ ಆದರೆ ರಿಪಬ್ಲಿಕನ್ ಪಕ್ಷ ಕಾರ್ಮಿಕರ ಪಕ್ಷವಾಗಿದೆ ಎಂದು ಅವರು ತಿಳಿಸಿದ್ದಾರೆ