ಮತ ಎಣಿಕೆ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ

ಬೀದರ:ಎ.29: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಮೇ 2 ರಂದು ಬೀದರ್‌ನಲ್ಲಿ ನಡೆಯಲಿದೆ.

ಬೀದರ್‌ನ ಬಿ.ವಿ.ಬಿ. ಕಾಲೇಜಿನ ಮತ ಎಣಿಕೆ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಆದೇಶ ಹೊರಡಿಸಿದ್ದಾರೆ.

ಕೋವಿಡ್ ಹರಡುವುದನ್ನು ನಿಯಂತ್ರಿಸಲು ಹಾಗೂ ರಾಜ್ಯದಲ್ಲಿ ಸಂಪೂರ್ಣ ನಿಷೇಧಾಜ್ಞೆ/ಲಾಕ್‍ಡೌನ್ ಜಾರಿಯಲ್ಲಿ ಇರುವ ಪ್ರಯುಕ್ತ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ವಿಜಯೋತ್ಸವ, ಮೆರವಣಿಗೆ, ಮತ ಎಣಿಕೆ ಕೇಂದ್ರದಲ್ಲಿ ಕಾನೂನು ಬಾಹಿರವಾಗಿ ಗುಂಪುಗೂಡುವುದು, ಓಡಾಡುವುದು, ಸಾರ್ವಜನಿಕ ಸಭೆ ನಡೆಸುವುದು, ಮತ ಎಣಿಕೆ ಕೇಂದ್ರದ ಸುತ್ತಮುತ್ತ ಜನ ಯಾವುದೇ ತರಹದ ಮಾರಕಾಸ್ತ್ರ ತರುವುದನ್ನು ನಿಷೇಧಿಸಿದ್ದಾರೆ.

ನಗರಸಭೆ ಎಣಿಕೆ ಕೇಂದ್ರದ ಸುತ್ತಲೂ ನಿಷೇಧಾಜ್ಞೆ: ಬೀದರ್ ನಗರಸಭೆ ಚುನಾವಣೆಯ ಮತ ಎಣಿಕೆ ನಗರದ ಗುರುನಾನಕ ಪಬ್ಲಿಕ್ ಸ್ಕೂಲ್ ಹಾಗೂ ಹಳ್ಳಿಖೇಡ (ಬಿ) ಪುರಸಭೆಯ ವಾರ್ಡ್ ಸಂಖ್ಯೆ 11 ರ ಉಪ ಚುನಾವಣೆಯ ಮತ ಎಣಿಕೆ ಹುಮನಾಬಾದ್ ತಹಶೀಲ್ದಾರ್ ಕಚೇರಿಯಲ್ಲಿ ಏಪ್ರಿಲ್ 30 ರಂದು ನಡೆಯಲಿದ್ದು, ಎರಡೂ ಎಣಿಕೆ ಕೇಂದ್ರಗಳ ಸುತ್ತಲೂ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದಾರೆ.ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ ಮತ ಎಣಿಕೆ ಕೇಂದ್ರದ ಸುತ್ತಮುತ್ತಲಿನ ನಿಷೇಧಾಜ್ಞೆ ಹಾಗೂ ಇತರ ನಿಯಮಗಳೇ ಬೀದರ್ ನಗರಸಭೆ ಹಾಗೂ ಹಳ್ಳಿಖೇಡ(ಬಿ) ಪುರಸಭೆ ಚುನಾವಣೆ ಮತ ಎಣಿಕೆಗೂ ಅನ್ವಯವಾಗಲಿವೆ.