ಮತ ಎಣಿಕೆ ಕಾರ್ಯ ಅಚ್ಚುಕಟ್ಟಾಗಿ ನಡೆಸಿ: ಡಿ.ಸಿ

ಬೀದರ:ಡಿ.29: ನಾಳೆ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಕಾರ್ಯವು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದರು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ನಿನ್ನೆ ಚುನಾವಣಾ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ನಡೆದ ಮತ ಎಣಿಕೆ ಕಾರ್ಯದ ಸಿದ್ಧತಾ ತರಬೇತಿಯಲ್ಲಿ ಅವರು ಮಾತನಾಡಿದರು.
ಮತ ಎಣಿಕೆಯು ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗುವುದರಿಂದ ಬೆಳಗ್ಗೆ 6.30ಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ ಎಣಿಕೆ ಕೇಂದ್ರದಲ್ಲಿ ಹಾಜರಿರಬೇಕು. ಮತಯಂತ್ರಗಳನ್ನು ಸರಬರಾಜು ಮಾಡುವ ಸಿಬ್ಬಂದಿಯು ಬೆಳಗ್ಗೆ 7.30ರಿಂದ ಸ್ಟ್ರಾಂಗ್ ರೂಮ್ ಬಳಿ ಹಾಜರಿರಬೇಕು. ಗುರುತಿನ ಚೀಟಿಯನ್ನು ಕಡ್ಡಾಯ ಬಳಸಬೇಕು. ಮೊಬೈಲ್ ಬಳಕೆಯನ್ನು ಕಡ್ಡಾಯ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರದಲ್ಲಿ ಶಿಸ್ತು ಮತ್ತು ಶಾಂತಿ ಪಾಲನೆ ಮಾಡುವುದರಿಂದ ಸುವ್ಯಸ್ಥಿತವಾಗಿ ಎಣಿಕೆ ನಡೆಸಲು ಸಹಕಾರಿಯಾಗಲಿದೆ. ಮತ ಎಣಿಕೆ ಕೇಂದ್ರದ ಆವರಣದಲ್ಲಿ ಧೂಮಪಾನ ಮತ್ತು ಮಧ್ಯಪಾನವ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಎಣಿಕೆ ಕೇಂದ್ರಕ್ಕೆ ಯಾವುದೇ ರೀತಿಯ ಮಾರಕಾಸ್ತ್ರಗಳು ತರದಂತೆ ನಿರ್ಭಂದಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ವೇಳೆ ಜಿಲ್ಲಾ ಚುನಾವಣಾ ಮಾಸ್ಟರ್ ಟ್ರೇನರ್ ಗೌತಮ ಅರಳಿ ಮಾತನಾಡಿ, ಪ್ರತಿಯೊಬ್ಬ ಅಭ್ಯರ್ಥಿಯು ಒಬ್ಬ ಎಣಿಕೆ ಏಜೆಂಟರನ್ನು ನೇಮಿಸಬಹುದು. ಪ್ರತಿಯೊಬ್ಬ ಅಭ್ಯರ್ಥಿ ಚುನಾವಣಾ ಏಜೆಂಟರಿಗೆ ಮತ ಎಣಿಕೆಯ ಸ್ಥಳ, ದಿನಾಂಕ ಮತ್ತು ಸಮಯವನ್ನು ಮುಂಗಡವಾಗಿ ತಿಳಿಸಬೇಕು. ಪ್ರತಿಯೊಬ್ಬ ಏಜೆಂಟರಿಗೆ ಭಾವಚಿತ್ರದೊಂದಿಗೆ ಗುರುತಿನ ಚೀಟಿ ಒದಗಿಸಬೇಕು. ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿಗಳು, ಚುನಾವಣಾ ಏಜೆಂಟರು, ಎಣಿಕೆ ಏಜೆಂಟರು, ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು ಮೊಬೈಲನ್ನು ತರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಸಹಾಯಕ ಆಯುಕ್ತೆ ಗರೀಮಾ ಪನ್ವಾರ, ಬಸವಕಲ್ಯಾಣ ಸಹಾಯಕ ಆಯುಕ್ತ ಭುವನೇಶ ಪಟೇಲ್, ತಹಸೀಲ್ದಾರರಾದ ಗಾಂಗಾದೇವಿ ಎಚ್.ಸಿ., ಚಂದ್ರಶೇಖರ ಪಾಟೀಲ, ನಾಗಯ್ಯ ಹಿರೇಮಠ, ಅಣ್ಣಾರಾವ್ ಪಾಟೀಲ, ಸಾವಿತ್ರ ಸಲಗರ, ಅಂಜುಮ್ ತಬಸುಮ್ ಸೇರಿದಂತೆ ಇನ್ನೀತರರು ಇದ್ದರು.