ಮತ ಎಣಿಕೆಗೆ ಸಕಲ ಸಿದ್ದತೆ


ಬಾಗಲಕೋಟೆ,ಜೂ.3: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜೂನ್ 4 ರಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬೆಳಿಗ್ಗೆ 8 ರಿಂದ ಮತ ಎಣಿಕೆ ಪ್ರಾರಂಭಗೊಳ್ಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆಂ.ಎಂ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮತ ಎಣಿಕೆಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಅಭ್ಯರ್ಥಿಗಳು, ಚುನಾವಣಾ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರುಗಳು ಅಂದು ಬೆಳಿಗ್ಗೆ 7 ಗಂಟೆಗೆ ಹಾಜರಿರಲು ತಿಳಿಸಲಾಗಿದೆ. ಪ್ರತಿ ಮತಕ್ಷೇತ್ರಕ್ಕೆ ತಲಾ ಒಂದು ಭದ್ರತಾ ಕೊಠಡಿ ಹಾಗೂ ಒಂದು ಮತ ಎಣಿಕೆ ಕೊಠಡಿ ಮಾಡಲಾಗಿದೆ ಎಂದು ತಿಳಿಸಿದರು.
ಪ್ರತಿ ಮತಕ್ಷೇತ್ರದ ಮತ ಏಣಿಕೆ ಕಾರ್ಯಕ್ಕಾಗಿ 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತ ಪತ್ರಗಳ ಎಣಿಕೆಗಾಗಿ ನೆಲ ಮಹಡಿಯ 22ರ ಕೊಠಡಿಯಲ್ಲಿ 14 ಟೇಬಲ್ ಹಾಗೂ 20ಎ ಕೊಠಡಿಯಲ್ಲಿ 10 ಟೇಬಲ್‍ಗÀಳ ವ್ಯವಸ್ಥೆ ಮತ್ತು ಇಟಿಪಿಬಿಎಸ್ ಸ್ಕ್ಯಾನಿಂಗ್‍ಕ್ಕಾಗಿ ಕೊಠಡಿ ಸಂ.20ಎ ರಲ್ಲಿ 14 ಟೇಬಲ್‍ಗÀಳ ವ್ಯವಸ್ಥೆ ಮಾಡಲಾಗಿದೆ. ನೆಲ ಮಹಡಿಯಲ್ಲಿ ರೂ.ನಂ.3ರಲ್ಲಿ ಮುಧೋಳ ಮತಕ್ಷೇತ್ರ, ರೂ.ನಂ.11ರಲ್ಲಿ ಬೀಳಗಿ ಮತಕ್ಷೇತ್ರ, ರೂ.ನಂ.24 ರಲ್ಲಿ ಬಾದಾಮಿ ಮತಕ್ಷೇತ್ರ, ರೂ.ನಂ.15 ರಲ್ಲಿ ನರಗುಂದ ಮತಕ್ಷೇತ್ರ ಹಾಗೂ ಮೊದಲನೇ ಮಹಡಿಯಲ್ಲಿ ರೂನಂ.110ರಲ್ಲಿ ತೇರದಾಳ, ರೂನಂ.115ರಲ್ಲಿ ಜಮಖಂಡಿ, ರೂನಂ.102ರಲ್ಲಿ ಬಾಗಲಕೋಟೆ ಹಾಗೂ ರೂನಂ.123ರಲ್ಲಿ ಹುನಗುಂದ ಮತಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.
ಪ್ರತಿ ಟೇಬಲ್‍ಗೆ ತಲಾ ಒಬ್ಬರು ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕ ಹಾಗೂ ಮೈಕ್ರೋ ಅಬ್ಸರವರ ನೇಮಕ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ಓರ್ವ ಸಹಾಯಕ ಚುನಾವಣಾಧಿಕಾರಿಗಳು ಇರುತ್ತಾರೆ. ಸೇವಾ ಮತದಾರರಿಂದ ಸ್ವೀಕರಿಸಲ್ಪಡುವ ಅಂಚೆ ಮತಪತ್ರಗಳ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಸಲುವಾರಿ 14 ಟೇಬಲ್‍ಗಳನ್ನು ಮಾಡಲಾಗಿದ್ದು, 14 ಸ್ಕ್ಯಾನಿಂಗ್ ಮೇಲ್ವಿಚಾರಕರು, 14 ಅಸಿಸ್ಟಂಟ್ ಹಾಗೂ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಕಾಯ್ದಿಟ್ಟ ಸಿಬ್ಬಂದಿಗಳು ಸೇರಿದಂತೆ ಎಣಿಕೆ ಕಾರ್ಯಕ್ಕೆ 645 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಸುಗಮ ಮತ ಎಣೆಕೆ ಕಾರ್ಯಕ್ಕೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅದರಲ್ಲಿ ಓರ್ವ ಪೊಲೀಸ್ ವರಿಷ್ಠಾಧಿಕಾರಿ, ಇಬ್ಬರು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, 4 ಜನ ಡಿಎಸ್‍ಪಿ, 10 ಸಿಪಿಐ, 27 ಪಿಎಸ್‍ಐ, 57 ಎ.ಎಸ್.ಐ, 126 ಹೆಡ್ ಕಾನ್ಸಟೇಬಲ್, 273 ಪೊಲೀಸ್, 25 ಡಬ್ಲೂಪಿಸಿ, ಇಬ್ಬರು ಕೆ.ಎಸ್.ಆರ್.ಪಿ ಹಾಗೂ 6 ಜನ ಡಿಎಆರ್ ನೇಮಿಸಲಾಗಿದೆ ಎಂದು ತಿಳಿಸಿದರು.
ಅಭ್ಯರ್ಥಿಗಳು ಮತ್ತು ಮತ ಎಣಿಕೆ ಏಜೆಂಟರುಗಳಿಗೆ ಪ್ರತ್ಯೇಕ ಪಾಕಿರ್ಂಗ್ ವ್ಯವಸ್ಥೆ ಮಾಡಲಾಗಿದೆ. ಸೀಮಿಕೇರಿಯಿಂದ ನವನಗರ ಕಡೆಗೆ ಬರುವ ರಸ್ತೆಯು ಸೀಮಿಕೇರಿಯಿಂದ ತೇಜಸ್ ಇಂಟರ್‍ನ್ಯಾಶನಲ್ ಸ್ಕೂಲವರೆಗೆ ಬಂದ್ ಇರುತ್ತದೆ. ಮತ ಎಣಿಕೆ ಕಾರ್ಯಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ, ಸಾರ್ವಜನಿಕರ ವಾಹನಗಳಿಗೆ ಓಡಾಡಲು ನಿರ್ಬಂಧವಿರುತ್ತದೆ. ಸಾರ್ವಜನಿಕರು ಗದ್ದನಕೇರಿಯಿಂದ ವಿದ್ಯಾಗಿರಿ ಮೂಲಕ ಹೋಗುವ ಮಾರ್ಗವನ್ನು ಉಪಯೋಗಿಸಲು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಎನ್.ಐ.ಸಿಯ ಗಿರಿಯಾಚಾರ, ಚುನಾವಣಾ ತಹಶೀಲ್ದಾರ ಪಂಪಯ್ಯ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.