ಮತ ಎಣಿಕೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲು ಸೂಚನೆ

ವಿಜಯಪುರ ಡಿ.25: ಇದೇ ಡಿಸೆಂಬರ್ 30 ರಂದು ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಪಟ್ಟಂತೆ ಮತ ಎಣಿಕೆಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಿನ್ನೆ (ಬುಧುವಾರ) ಜಿಲ್ಲೆಯ ತಹಶೀಲ್ದಾರರು ಹಾಗೂ ಚುನಾವಣಾ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪ ಮತ್ತು ಗೊಂದಲಗಳಿಗೆ ಅವಕಾಶ ನೀಡದೆ ಚುನಾವಣಾ ಆಯೋಗ ಮಾರ್ಗಸೂಚಿಯನ್ವಯ ಮತ ಎಣಿಕೆ ಕಾರ್ಯವನ್ನು ಶಿಸ್ತುಬದ್ಧ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಅವರು ಸೂಚನೆ ನೀಡಿದರು.

ಅದರಂತೆ ಮತ ಎಣಿಕೆ, ಮತಎಣಿಕೆ ಟೇಬಲ್‍ಗಳ ಅರೆಂಜ್‍ಮೆಂಟ್ಸ್, ಮತಎಣಿಕೆ ಸುತ್ತುಗಳ ಬಗ್ಗೆ ಚರ್ಚಿಸಿ, ಯಾವ ಸುತ್ತಿನಲ್ಲಿ ಯಾವ ಗ್ರಾಮ ಪಂಚಾಯತಿ, ಯಾವ ಕ್ಷೇತ್ರ ಎಂದು ಹೊರಗಡೆ ಫ್ಲೇಕ್ಸ್ ಹಾಕಬೇಕು.

ಮತಎಣಿಕೆ ಕೇಂದ್ರದ ಪ್ರವೇಶದ್ವಾರದಲ್ಲಿ ಸೂಕ್ತ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಮತಎಣಿಕೆ ಕೇಂದ್ರದ ಗೇಟ್‍ನಲ್ಲಿ ಮೇಟಲ್ ಡಿಟೆಕ್ಟರ್ ಅಳವಡಿಸಬೇಕು. ಮಾಹಿತಿಯನ್ನು ಗಣಿಕೀಕರಣ ಮಾಡಲು ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್ ಹಾಗೂ ಇಂಟರ್‍ನೆಟ್ ವ್ಯವಸ್ಥೆ ಮಾಡಿಕೊಳ್ಳುವಂತೆ ಅವರು ಸೂಚಿಸಿದರು.

ಪ್ರತಿ ಮತಎಣಿಕೆ ಕೋಣೆಗೆ ಜವಾಬ್ದಾರಿಯುತ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕು. ಭದ್ರತಾ ಕೊಠಡಿಯಿಂದ ಮತಎಣಿಕೆ ಕೊಠಡಿ, ಟೇಬಲ್‍ಗೆ ಕಳಿಸುವ ಬಗ್ಗೆ, ಸೂಕ್ತ ಅಧಿಕಾರಿಗೆ ಮೇಲ್ವಿಚಾರಣೆ ಮಾಡಲು ವಹಿಸಬೇಕು.

ಮತಎಣಿಕೆ ಸಿಬ್ಬಂದಿಗಳಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಬೇಕು. ತಹಶೀಲ್ದಾರರು ಮತ್ತು ತಾಲೂಕಾ ನೋಡಲ್ ಅಧಿಕಾರಿ ಪರಿಶೀಲಿಸಿದ ನಂತರವೇ ಫಲಿತಾಂಶವನ್ನು ಘೋಷಿಸಬೇಕು. ಮತಎಣಿಕೆ ಮುಗಿದ ನಂತರ ಮತಪೆಟ್ಟಿಗೆಗಳನ್ನು ಖಜಾನೆಯಲ್ಲಿ ಇರಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ಒದಗಿಸಬೇಕು ಎಂದು ಅವರು ಸೂಚಿಸಿದರು.

ಮತಎಣಿಕೆ ಕಾರ್ಯ : ವಿಜಯಪುರ ತಾಲೂಕಿನ ಶ್ರೀ ಡಿ.ಎನ್ ದರಬಾರ್ ಪ್ರೌಢಶಾಲೆ, ಬಬಲೇಶ್ವರ ತಾಲೂಕಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ತಿಕೋಟಾ ತಾಲೂಕಿನ ಶ್ರೀ ಎ.ಬಿ ಜತ್ತಿ ಪ್ರೌಢಶಾಲೆ ಹಾಗೂ ಪ.ಪೂ ಮಹಾವಿದ್ಯಾಲಯ, ಬ.ಬಾಗೇವಾಡಿ ತಾಲೂಕಿನ ಶ್ರೀ ಬಸವೇಶ್ವರ ಸರಕಾರಿ ಪ.ಪೂ ಕಾಲೇಜನಲ್ಲಿ ನಡೆಯಲಿದೆ.

ಅದರಂತೆ ಕೋಲ್ಹಾರ ತಾಲೂಕಿನ ಸರಕಾರಿ ಪ್ರೌಢಶಾಲೆ, ನಿಡಗುಂದಿ ತಾಲೂಕಿನ ಗ್ರಾ.ವಿ.ವ ಸಂಘ ಸ್ವತಂತ್ರ ಪ.ಪೂ ಕಾಲೇಜ, ಮುದ್ದೇಬಿಹಾಳ ತಾಲೂಕಿನ ಎಂ.ಜಿ.ವ್ಹಿ.ಸಿ ಕಾಲೇಜ, ತಾಳಿಕೋಟ ತಾಲೂಕಿನ ಶ್ರೀ ಎಸ್.ಕೆ ಪ.ಪೂ ಕಾಲೇಜ, ಇಂಡಿ ತಾಲೂಕಿನ ಸರಕಾರಿ ಆದರ್ಶ ವಿದ್ಯಾಲಯ, ವಿದ್ಯಾಗಿರಿ, ವಿಜಯಪುರ ರೋಡ್ ಇಂಡಿಯಲ್ಲಿ ನಡೆಯಲಿದೆ.

ಚಡಚಣ ತಾಲೂಕಿನ ಶ್ರೀ ಮೋಹನ ಶಿಕ್ಷಣ ಸಂಸ್ಥೆ, ಸಿಂದಗಿ ತಾಲೂಕಿನ ಜಿ.ಪಿ ಪೋರವಾಲ ಮತ್ತು ಆರ್.ಡಿ ಪಾಟೀಲ ಕಾಲೇಜ, ದೇ.ಹಿಪ್ಪರಗಿ ತಾಲೂಕಿನ ಎ.ಬಿ ಸಾಲಕ್ಕೆ ಪಿ.ಯು ಕಾಲೇಜಿನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡಾದೆ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.