ಮತ ಎಣಿಕಾ ಕೊಠಡಿಯಲ್ಲಿ ಕಟ್ಟಿದ ನೆಟ್‌ಗೆ ಆಕ್ಷೇಪ


ಸುಳ್ಯ, ಡಿ.೩೦- ಚುನಾವಣಾ ಮತ ಎಣಿಕೆ ಕೊಠಡಿಯಲ್ಲಿ ಟೇಬಲ್ ಸುತ್ತ ನೆಟ್ ಕಟ್ಟಿರುವುದಕ್ಕೆ ಅಭ್ಯರ್ಥಿಗಳು ಮತ್ತು ಏಜೆಂಟ್ ಗಳು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಇಂದು ಬೆಳಗ್ಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಕೊಠಡಿ ಸಂಖ್ಯೆ ೧೧ರಲ್ಲಿ ದೇವಚಳ್ಳ ಮತ್ತು ಗುತ್ತಿಗಾರು ಗ್ರಾಮ ಪಂಚಾಯತ್ ಚುನಾವಣಾ ಮತ ಎಣಿಕೆ ನಡೆಯುವ ಕೊಠಡಿಯಲ್ಲಿದ್ದ ಅಭ್ಯರ್ಥಿಗಳು ಮತ್ತು ಏಜೆಂಟ್ ಗಳು ಆಕ್ಷೇಪ ವ್ಯಕ್ತಪಡಿಸಿ ನಮಗೆ ನೆಟ್ ಅಡ್ಡವಾಗುತ್ತಿದ್ದು ಸರಿಯಾಗಿ ಕಾಣಿಸುತ್ತಿಲ್ಲ ಎಂದು ದೂರಿದರು. ಈ ಕುರಿತು ಸ್ವಲ್ಪ ಹೊತ್ತು ಚರ್ಚೆ ನಡೆದು ಗೊಂದಲ ಸೃಷ್ಟಿಯಾಯಿತು. ಚುನಾವಣಾ ಆಯೋಗದ ಸೂಚನೆಯ ಮೇರೆಗೆ ನೆಟ್ ಕಟ್ಟಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿಕೆ ನೀಡಿದರು. ಬಳಿಕ ಚರ್ಚೆ ನಡೆದು ಗೊಂದಲ ಪರಿಹರಿಸಿ ಬಳಿಕ ಮತ ಎಣಿಕೆ ಮುಂದುವರಿಸಲಾಯಿತು.