ಮತ್ಸ್ಯ ಸಂಪದ ಯೋಜನೆ ಸೂಕ್ತ ಮಾಹಿತಿ ನೀಡಿ

ಕೋಲಾರ,ಸೆ,೨೨-ಸರ್ಕಾರದಿಂದ ಜಾರಿಗೆ ತಂದಿರುವ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಕುರಿತು ಜನರಿಗೆ ಸೂಕ್ತ ಮಾಹಿತಿಯನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೀನುಗಾರಿಕೆ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯ (ಪಿ,ಎಂ, ಎಂ ಎಸ್ ವೈ) ೨೦೨೩-೨೦೨೪ನೇ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಯೋಜನೆಯ ಸೌಲಭ್ಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಮೀನು ಸಂಪತ್ತನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಮೀನುಗಾರಿಕೆ ಇಲಾಖೆಯಿಂದ ಮೀನುಗಳ ಉತ್ಪಾದನೆಯಲ್ಲಿ ಉತ್ಪಾದಿಸಿದ ಮೀನು ಮರಿಗಳನ್ನು ಹೆಚ್ಚಿನ ನೀರಿನ ಪ್ರಮಾಣವಿರುವ ಕೆರೆಗಳಿಗೆ ಬಿತ್ತನೆ ಮಾಡುವುದು, ಹೆಚ್ಚಿನ ಮೀನು ಉತ್ಪಾದನೆಗೆ ತಾಂತ್ರಿಕ ಸಲಹೆಗಳನ್ನು ನೀಡುವ ಮೂಲಕ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಬೇಕು.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನು ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳು ವಿಳಂಬವಾಗದ ರೀತಿಯಲ್ಲಿ ದೊರೆಯವಂತಾಗಬೇಕು. ಈ ಯೋಜನೆಯಡಿ ಇಲಾಖೆಗೆ ನೀಡಿದ ಗುರಿಯನ್ನು ತಲುಪಿ ಯೋಜನೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಯೋಜನೆಯ ಕುರಿತು ಫಲಾನುಭವಿಗಳಿಗೆ ಹೆಚ್ಚಿನ ಪ್ರಚಾರ ನೀಡಬೇಕು. ಈ ಮೂಲಕ ಮುಂದಿನ ದಿನಗಳಲ್ಲಿ ಶೇ. ೧೦೦ರಷ್ಟು ಪ್ರಗತಿ ಸಾಧಿಸಬೇಕು. ಇಲಾಖೆಯಿಂದ ಸಾರ್ವಜನಿಕರಿಗೆ ಸಿಗುವ ವಿವಿಧ ಯೋಜನೆಗಳ ಕುರಿತು ಸೂಕ್ತ ಮಾಹಿತಿ ಒದಗಿಸಬೇಕೆಂದರು.
ಸಭೆಯಲ್ಲಿ ಕೆಜಿಎಫ್ ಪೊಲೀಸ್ ವರಿಷಧಿಕಾರಿಯಾದ ಶಾಂತರಾಜು, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಅನಂತು ಸೇರಿದಂತೆ ಮತ್ತಿತರ ಉಪಸ್ಥಿತರಿದ್ದರು.