ಮತ್ಸ್ಯ ಸಂಪದ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚನೆ

ಚಾಮರಾಜನಗರ, ನ.06- ಮೀನು ಕೃಷಿಕರು, ಮೀನುಗಾರಿಕೆ ಅವಲಭಿತರ ಆದಾಯ ಹೆಚ್ಚಳ, ಉದ್ಯೋಗ ಸೃಷ್ಠಿ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಸೇರಿದಂತೆ ಹಲವು ಸದುದ್ದೇಶಗಳಿಗೆ ನೆರವಾಗಲು ರೂಪಿಸಲಾಗಿರುವ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೀನುಗಾರಿಕೆ ಸಾಮಥ್ರ್ಯವನ್ನು ಸುಸ್ಥಿರ, ಹೊಣೆಗಾರಿಕೆಯಿಂದ ಹೆಚ್ಚಳ ಮಾಡುವುದು, ನೀರಿನ ವಿಸ್ತರಣೆ ಸಮರ್ಥ ಬಳಕೆ, ವಿವಿಧ ವಿಧಾನಗಳ ಅನುಸರಿಸುವುದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮುಖ್ಯ ಉದ್ದೇಶವಾಗಿದೆ. ಮೀನು ಕೃಷಿ ನಿರ್ವಹಣೆ, ಗುಣಮಟ್ಟದಲ್ಲಿ ಸುಧಾರಣೆ, ರಫ್ತು ಹೆಚ್ಚಳ ಸೇರಿದಂತೆ ಇತರೆ ಹಲವು ಕಾರ್ಯಕ್ರಮಗಳನ್ನು ಯೋಜನೆಯಡಿ ಕೈಗೊಂಡು ಅನುಷ್ಠಾನಗೊಳಿಸಲು ಅವಕಾಶವಿದೆ. ಹೀಗಾಗಿ ಮತ್ಸ್ಯ ಸಂಪದ ಯೋಜನೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಯೋಜನೆಯಡಿ ಮೀನು ಕೃಷಿ, ಕೊಳ ನಿರ್ಮಾಣ ಮಾಡಲು ನೆರವು ನೀಡಬೇಕಿದೆ. ಈ ಬಗ್ಗೆ ಗುರಿ ಅನುಸಾರ ಮೀನು ಕೃಷಿ ಅವಲಂಬಿತರಿಗೆ ಸೌಲಭ್ಯ ಒದಗಿಸಬೇಕಿದೆ, ನೀರು ಲಭ್ಯತೆ ಇರುವ ಕಡೆ ಯೋಜನೆ ಅನುಷ್ಠಾನಕ್ಕೆ ಹೆಚ್ಚು ಗಮನ ನೀಡಬೇಕು ಎಂದು ತಿಳಿಸಿದರು.
ಕಡಿಮೆ ಜಾಗದಲ್ಲಿ ಕಡಿಮೆ ನೀರು ಬಳಸಿ ಹೆಚ್ಚು ಮೀನು ಉತ್ಪಾದಿಸುವ ನೂತನ ತಂತ್ರಜ್ಞಾನ ಬಯೋಪ್ಲಾಕ್ ಅನ್ನು ಪರಿಚಯಿಸಲಾಗಿದೆ. ಇಲಾಖೆ ವತಿಯಿಂದ ಈ ತಂತ್ರಜ್ಞಾನ ಬಳಸಿ ಹೇಗೆ ಆರ್ಥಿಕವಾಗಿ ಸಧೃಡವಾಗಬಹುದು ಎಂಬ ಬಗ್ಗೆ ವ್ಯಾಪಕವಾಗಿ ತಿಳಿಸಬೇಕಿದೆ. ಹೀಗಾಗಿ ಈ ಯೋಜನೆ ಕುರಿತು ಹೆಚ್ಚಿನ ಪ್ರಚಾರ ಕೈಗೊಂಡು ತಂತ್ರಜ್ಞಾನ ಬಳಕೆಯಿಂದ ಗರಿಷ್ಠ ಪ್ರಯೋಜನ ಪಡೆಯುವಂತಾಗಲು ಸೂಕ್ತ ಕಾರ್ಯ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿಯವರು ಸಲಹೆ ಮಾಡಿದರು.
ಮೀನು ಸಾಗಣೆ ಮಾಡಲು ಶಾಖ ನಿರೋಧಕ ವಾಹನ, ಮೀನು ಮಾರಾಟಕ್ಕಾಗಿ ದ್ವಿಚಕ್ರ, ತ್ರಿಚಕ್ರ ವಾಹನ ಖರೀದಿಸಲು ನೀಡಲಾಗುವ ಸಹಾಯ ಧನ ಸೌಲಭ್ಯ ತ್ವರಿತಗತಿಯಲ್ಲಿ ತಲುಪಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಮೀನುಗಾರರ ಮಹಾ ಮಂಡಳಿಯಿಂದ ಮೀನುಗಾರರಿಗೆ ನೆರವಾಗಲು ವಿವಿಧ ಕಾರ್ಯಕ್ರಗಳಡಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕಿದೆ ಎಂದರು.
ವೃತ್ತಿ ಪರ, ಸಾಂಪ್ರದಾಯಿಕ ಮೀನುಗಾರರು ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಿ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕು. ಸ್ಥಳೀಯರಿಗೆ ಉತ್ತೇಜನ ನೀಡಬೇಕು, ನಗರಸಭೆ ವ್ಯಾಪ್ತಿಯಲ್ಲಿ ಮೀನು ಮಾರಾಟ ಮಳಿಗೆ, ಕಿಯೋಸ್ಕ್ ತೆರೆಯಲು ಅಗತ್ಯ ಪ್ರಕ್ರಿಯೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ತಿಳಿಸಿದರು.
ಮೀನುಗಾರಿಕೆ ಉಪನಿರ್ದೇಶಕರಾದ ಎಂ.ಎಸ್. ಮಂಜೇಶ್ವರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಭಾಸ್ಕರ್, ಲೀಡ್ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ವಿಜಯ್ ಕುಮಾರ್ ಚೌರಾಸಿಯ, ಕೃಷಿ ಉಪನಿರ್ದೇಶಕರಾದ ಮುತ್ತುರಾಜ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಜೆ.ಎಂ.ಪ್ರಶಾಂತ್, ಕೆ.ವಿ. ಶ್ವೇತಾ, ಪ್ರಗತಿ ಪರ ಮೀನು ಕೃಷಿಕರಾದ ಕೆ.ಲಿಂಗರಾಜು ಇತರರು ಸಭೆಯಲ್ಲಿ ಹಾಜರಿದ್ದರು.