ಮತ್ತೊಮ್ಮೆ ಸಿಎಂ ಆಗಲು ಸಿದ್ದರಾಮಯ್ಯ ಬಳ್ಳಾರಿಯಿಂದ  ಸ್ಪರ್ಧೆ ಮಾಡಲಿ: ದಿವಾಕರ ಬಾಬು


 * ವೈಯಕ್ತಿಕವಾಗಿ ಆಹ್ವಾನಿಸಿರುವೆ
* ಹಿರಿಯರೊಂದಿಗೆ ಸಮಾಲೋಚನೆ ಮಾಡಿರುವೆ
* ನನಗೆ ಟಿಕೆಟ್ ನೀಡುವ ಭರವಸೆ ಇದೆ.
* ಯಾರೇ ಟಿಕೆಟ್ ತಂದರೂ ಅವರನ್ನು ಬೆಂಬಲಿಸುವೆ
* ಕ್ಷೇತ್ರದ ಅಭಿವೃದ್ಧಿಗಾಗಿ ಸಿದ್ದರಾಮಯ್ಯಗೆ ಸ್ವಾಗತ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ;ಮಾ,24-  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗಲು ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಲಿ., ಇದರಿಂದ ಕ್ಷೇತ್ರದ ಅಭಿವೃದ್ಧಿ ಸಹ ಆಗಲಿದೆ ಎಂದು ಮಾಜಿ ಸಚಿವ ಎಂ.ದಿವಾಕರ ಬಾಬು ಹೇಳಿದರು.
ಅವರು ಇಂದು ನಗರದ ಮುಂಡ್ಲೂರು ಗಂಗಪ್ಪ ಜಿನ್ನದಲ್ಲಿ  ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು. ಗಣಿ ಅಕ್ರಮದ ಮೂಲಕ ಪಾದಯಾತ್ರೆ ನಡೆಸಿ 2013 ರಲ್ಲಿ ಸಿಎಂ ಆದರು. ಈ ಬಾರಿ  ಇಲ್ಲಿಂದ ಸ್ಪರ್ಧೆ ಮಾಡಿ ಮತ್ತೆ ಸಿಎಂ ಆಗಲಿ. ಅಲ್ಲಂ ವೀರಭದ್ರಪ್ಪ,  ನಾರಾಯಣ ರೆಡ್ಡಿ ಸೇರಿದಂತೆ ಹಿರಿಯ ರಾಜಕಾರಣಿಗಳ ಬಳಿ ಸಮಾಲೋಚನೆ ನಡೆಸಿ, ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿರುವೆ ವೈಯಕ್ತಿಕವಾಗಿ ನಾನು ಅವರನ್ನು  ಕರೆದಿದ್ದೇನೆ ಸಮಯ ಬರಲಿ ಯೋಚನೆ ಮಾಡೋಣ ಎಂದರು.
ಅವರು ತಮ್ಮ ಕ್ಷೇತ್ರವನ್ನು ಮಗನಿಗೆ ಬಿಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ಕ್ಷೇತ್ರ ಇಲ್ಲ ಎನ್ನುವುದು ಬೇಕಿಲ್ಲ. ಈ ಹಿಂದೆ ಹೊರಗಿನಿಂದ ಬಂದು ಬಳ್ಳಾರಿ ಜಿಲ್ಲೆಯಲ್ಲಿ ಸ್ಪರ್ಧೆ ಮಾಡಿ ಸಾಕಷ್ಟು ಅಭಿವೃದ್ಧಿ ಆಗಿದೆಂದರು.
ಈ ಬಾರಿ ಸೀನಿಯಾರಿಟಿ ಮೇಲೆ ನನಗೆ ಟಿಕೆಟ್ ಕೊಡಲು ಪಕ್ಷ  ರೆಡಿ ಇದೆ ಆದರೂ, ನಾನು ಸಿದ್ದರಾಮಯ್ಯ ಅವರನ್ನು ಇಲ್ಲಿ ಸ್ಪರ್ಧೆ ಮಾಡಲು ಕೋರುತ್ತೇನೆ ಕಾರಣ ಅಭಿವೃದ್ಧಿ ದೃಷ್ಟಿಯಿಂದ. ಅವರು ಇಲ್ಲಿಂದ ಗೆದ್ದರೆ ಈ ವರಗೆ ಕೈಗಾರಿಕೆಗಳಿಗೆ ವಶಪಡಿಸಿಕೊಂಡ ಜಮೀನುಗಳಲ್ಲಿ ಕೈಗಾರಿಕೆಗಳ ಸ್ಥಾಪನೆ, ವಾರ್ಷಿಕ 200 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಅದರ ಸದ್ಭಳಕೆ ಆಗಬೇಕಿದೆ. ಜವಳಿ ಪಾರ್ಕ್ ನೆನೆಗುದಿಗೆ ಬಿದ್ದಿದೆ. ಹಾಗಾಗಿ‌ ಸಿದ್ದರಾಮಯ್ಯನವರಂತವರು ಇಲ್ಲಿ ಸ್ಪರ್ಧೆ ಮಾಡಲಿ ಎಂದರು.
ನನಗೆ ಟಿಕೆಟ್ ನೀಡಿ ಗೆದ್ದರೆ. ಕ್ಷೇತ್ರದಲ್ಲಿನ ನಿವೇಶನ ಇಲ್ಲದ ಎಲ್ಲರಿಗೂ ನಿವೇಶನ ನೀಡುವುದು, ರಸ್ತೆಗಳ ಅಗಲೀಕರಣ, ಕುಡಿಯುವ ನೀರಿನ‌ ಕೆರೆಗಳ ಅಭಿವೃದ್ಧಿ ಮಾಡುವ ಉದ್ದೇಶ ಇದೆಂದರು.
ಸ್ಪರ್ಧಾ ಆಕಾಂಕ್ಷಿಗಳಿಂದ ಇದಕ್ಕೆ ಸಮ್ಮತಿ ಇದೆಯಾ, ಇದ್ದರೆ ಅವರೇಕೆ ಬಂದಿಲ್ಲ ಎಂಬ ಪ್ರಶ್ನೆಗೆ. ಸಹಜವಾಗಿ ಆಕಾಂಕ್ಷೆ ಇರುತ್ತೆ ನಾನು ಹಿರಿಯರೊಂದಿಗೆ  ಮಾತನಾಡಿರುವೆ ಎಂದರು. 
ನನಗೆ ಟಿಕೆಟ್ ನೀಡದೆ ಬೇರೆ ಯಾರಿಗೇ ಟಿಕೆಟ್ ನೀಡಿದರೂ ಅವರ ಗೆಲುವಿಗೆ ನಾನು ಬೆಂಬಲಿಸುವೆ ಎಂದರು.