ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯಾಗಿಸಲು ಶ್ರಮಿಸಿ: ಕವಟಗಿ

ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.18: ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಾನುವಾರ ಲೋಕಸಭಾ ಚುನಾವಣೆ ಅಂಗವಾಗಿ ವಿಜಯಪುರ ವಿಧಾನಸಭಾ ಮತಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ ಸಭೆ ನಡೆಯಿತು.
ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ ಮಾತನಾಡಿ, ದೇಶದ ಸುರಕ್ಷತೆ, ಅಭಿವೃದ್ಧಿ ದೃಷ್ಟಿಯಿಂದ ವಿಶ್ವ ನಾಯಕರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಚುನಾವಣೆ ನಿರ್ವಣೆಗಾಗಿ ನೇಮಕ ಮಾಡಲಾದ ಚುನಾವಣಾ ನಿರ್ವಹಣಾ ಸಮಿತಿ ಪದಾಧಿಕಾರಿಗಳು ಪ್ರಾಮಾಣಿಕ ಹಾಗೂ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದರೆ ನಮ್ಮ ಅಭ್ಯರ್ಥಿ ಗೆಲುವು ಸುಲಭ ಎಂದು ಹೇಳಿದರು.
ಲೋಕಸಭಾ ಚುನಾವಣಾ ಸಂಚಾಲಕ ಅರುಣ ಶಹಾಪುರ ಮಾತನಾಡಿ, ಬೂತ್ ಗೆದ್ದರೆ, ದೇಶ ಗೆಲ್ಲುವುದು ಸುಲಭ. ಹೀಗಾಗಿ ಸಮಿತಿ ಜವಾಬ್ದಾರಿ ಜೊತೆಗೆ ಬೂತ್ ಮಟ್ಟದಲ್ಲಿಯೂ ಕೆಲಸ ಮಾಡಬೇಕು. ನಮ್ಮ ಸರ್ಕಾರದ ಸಾಧನೆಗಳನ್ನು ತಿಳಿದುಕೊಂಡು, ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮತಕ್ಷೇತ್ರ ಪ್ರಭಾರಿ ವಿವೇಕಾನಂದ ಡಬ್ಬಿ, ಸಂಚಾಲಕ ಬಸವರಾಜ ಬೈಚಬಾಳ, ಮಂಡಲ ಉಸ್ತುವಾರಿ ಸಾಬು ಮಾಶ್ಯಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ ಸೇರಿದಂತೆ ನಗರ ಮಂಡಲ ಹಾಗೂ ಮೋರ್ಚಾಗಳ ಪದಾಧಿಕಾರಿಗಳು ಇದ್ದರು.
ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಪಾಪುಸಿಂಗ್ ರಜಪೂತ ಸ್ವಾಗತಿಸಿ, ನಿರೂಪಿಸಿದರು. ಪ್ರವೀಣ ಕೂಡಗಿ ವಂದಿಸಿದರು.