ಮತ್ತೊಂದು ಮೂಕಿಚಿತ್ರ ಸೆಟ್ಟೇರಿದ ಮಹಾಗುರು

ತಮಿಳು ಚಿತ್ರರಂಗದ ಸಕಲಕಲಾವಲ್ಲಭ ಕಮಲ್ ಹಾಸನ್ ನಟನೆಯ ಮೂಕಿ ಚಿತ್ರ ತೆರೆ ಕಂಡು ಯಶಸ್ವಿಯಾದ ಬರೋಬ್ಬರಿ 38 ವರ್ಷಗಳ ಬಳಿಕ ಕನ್ನಡದಲ್ಲಿ ಮತ್ತೊಂದು ಮೂಕಿಚಿತ್ರ ಸೆಟ್ಟೇರಿದೆ. ಅದುವೇ “ ಮಹಾಗುರು”.

ಚಿತ್ರಕ್ಕೆ  ಕಸ್ತೂರಿ ಜಗನ್ನಾಥ ಆಕ್ಷನ್‍ಕಟ್ ಹೇಳುತ್ತಿದ್ದು ಜಸ್ಸಿನ್ ಮತ್ತು ಪಿರೋಜ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಜಗನ್ನಾಥ. ನಿಧಿಯನ್ನು ಹುಡುಕಲು ಹೊರಟವರ ಕಥೆಯನ್ನು ಚಿತ್ರ ಆಧರಿಸಿದೆ. ಸಂಪೂರ್ಣವಾಗಿ ಚಿತ್ರ ಫಾಂಟಸಿಯಿಂದ ಕೂಡಿದೆ. ಬೆಂಗಳೂರು,ಸಕಲೇಶಪುರ ಸೇರಿದಂತೆ ಮತ್ತಿತರರ ಕಡೆ ಚಿತ್ರೀಕರಣ ಮಾಡುವ ಉದ್ದೇಶ ಹೊಂದಲಾಗಿದೆ. ಚಿತ್ರದಲ್ಲಿ ಕಂಪ್ಯೂಟರ್ ಗ್ರಾಫಿಕ್ ಕೆಲಸ ಹೆಚ್ಚು ಇರಲಿದೆ, ಜೊತೆಗೆ ಮಲೆಯಾಳಂ ಮತ್ತು ಬಾಲಿವುಡ್ ನಟರು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಹಂಚಿಕೊಂಡರು. ಎಲ್ಲಾ ಅಂದುಕೊಂಡಂತೆ ಆದರೆ ಚಿತ್ರವನ್ನು ಮುಂದಿನ ವರ್ಷ ತೆರೆಗೆ ತರಲಾಗುವುದು ಎಂದು ವಿವರ ನೀಡಿದರು.

ನಟಿ ಮಹಿಮಾ ಗುಪ್ತ ಮಾತನಾಡಿ, ಕನ್ನಡದಲ್ಲಿ ಇದು ಮೊದಲ ಚಿತ್ರ. ಏಂಜಲ್ ಪಾತ್ರ ಮಾಡುತ್ತಿದ್ದೇನೆ. ಮೂಕಿ ಚಿತ್ರವಾದರೂ ಭಾವನೆಗಳನ್ನು ವ್ಯಕ್ತಪಡಿಸಬೇಕಾಗಿದೆ. ಹೀಗಾಗಿ ಸಂಭಾಷಣೆ ಇಲ್ಲದಿದ್ದರೂ ಕೇಳಿ ಅರ್ಥಮಾಡಿಕೊಂಡು ನಟಿಸುವೆ ಎಂದರು.

ಹಿರಿಯ ಕಲಾವಿದ ಮೈಸೂರು ರಮಾನಂದ್. ಚಿತ್ರದಲ್ಲಿ ನಿಧಿ ಲಪಟಾಯಿಸುವ ಮಂತ್ರವಾದಿಯ ಪಾತ್ರ ಮಾಡುತ್ತಿದ್ದೇನೆ. ಚಿತ್ರದಲ್ಲಿ ನನ್ನದು ದ್ವಿಪಾತ್ರ ಎಂದು ವಿವರ ನೀಡಿದರು.ನಿರ್ಮಾಪಕರಾದ ಜೆಸ್ಸಿನ್ ಮತ್ತು ಫಿರೋಜ್ ಮಾಹಿತಿ ಹಂಚಿಕೊಂಡರು.

ಬೆಲೆ ಇಲ್ಲದಂತಾಗಿದೆ

ಡಿಜಿಟಲ್ ಬಂದ ಮೇಲೆ ಛಾಯಾಗ್ರಾಹಕರಿಗೆ ಬೆಲೆ ಇಲ್ಲದಂತಾಗಿದೆ. ಲೈಟಿಂಗ್ ಬಗ್ಗೆ ಗೊತ್ತಿಲ್ಲದ ಚಿತ್ರತಂಡ ಸಹಾಯಕ ಕೂಡ ಕಪ್ಪು ಇದೆ ನೋಡಿ ಎನ್ನುತ್ತಾನೆ. ಎಲ್ಲಿಗೆ ಬಂದಿದೆ ನೋಡಿ ಎಂದು ಹಿರಿಯ ಛಾಯಾಗ್ರಾಹಕ ಎ.ಸಿ ಮಹೇಂದ್ರನ್ ಅಸಮಾಧಾನ ಹೊರಹಾಕಿದರು. ಮೊಬೈಲ್ ಇದ್ದವನೇ ಕ್ಯಾಮರಮನ್ ಎನ್ನುವಂತಾಗಿದೆ. ಚಿತ್ರೀಕರಣದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಕೆಲಸ ಇಷ್ಟವಾಗದಿದ್ದರೆ ಚಿತ್ರದಲ್ಲಿ ಕೆಲಸ ಮಾಡುವುದಿಲ್ಲ ಎಂದು ನೇರವಾಗಿಯೇ ಹೇಳಿದರು.