ಮತ್ತೆ ಸಕ್ರಿಯ ರಾಜಕೀಯಕ್ಕೆ ಎಸ್.ಆರ್. ಪಾಟೀಲ

ಬ್ಯಾಡಗಿ, ಏ20: ಕಳೆದ ಎರಡು ತಿಂಗಳ ಹಿಂದೆ ವೈಯುಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಕಾಂಗ್ರೇಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ರಾಜಕಾರಣದಿಂದ ನಿವೃತ್ತಿ ಹೊಂದಿದ್ದ ತಾಲೂಕಿನ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಅರ್. ಪಾಟೀಲ ತಮ್ಮ ರಾಜೀನಾಮೆಯನ್ನು ಹಿಂಪಡೆದು ಮತ್ತೇ ಸಕ್ರಿಯ ರಾಜಕಾರಣಕ್ಕೆ ಮರಳಿದ್ದಾರೆ.

ಪಟ್ಟಣದ ಕಾಂಗ್ರೇಸ್ ಭವನದಲ್ಲಿ ಸೋಮವಾರ ಈ ಕುರಿತು ಪತ್ರಿಕಾಗೋಷ್ಠಿಯನ್ನು ನಡೆಸಿದ ಅವರು, ಕಳೆದ ನಲ್ವತ್ತು ವರ್ಷಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ನಿಷ್ಠಾವಂತ ಕಾರ್ಯಕರ್ತರಾಗಿ, ಮುಖಂಡರಾಗಿ ಹಲವು ಹುದ್ದೆಗಳನ್ನು ವಹಿಸಿಕೊಂಡು ಗೌರವದಿಂದ ರಾಜಕಾರಣ ಮಾಡಿರುವ ತಾವು ಕೆಲ ವೈಯುಕ್ತಿಕ ಕಾರಣಗಳಿಂದ ಪಕ್ಷಕ್ಕೆ ರಾಜೀನಾಮೆ ನೀಡಿ ರಾಜಕಾರಣದಿಂದ ದೂರ ಉಳಿಯಲು ನಿರ್ಧಾರ ಕೈಗೊಂಡಿದ್ದೆ. ಆದರೆ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರು, ಜಿಲ್ಲೆಯ ಹಾಗೂ ತಾಲೂಕಿನ ಮುಖಂಡರು ಮತ್ತು ಕಾರ್ಯಕರ್ತರ ಒತ್ತಡಕ್ಕೆ ಮಣಿದು ತಮ್ಮ ರಾಜೀನಾಮೆಯನ್ನು ಹಿಂಪಡೆದು ಮತ್ತೇ ತಾವು ಸಕ್ರೀಯ ರಾಜಕಾರಣಕ್ಕೆ ಮರಳಿರುವುದಾಗಿ ತಿಳಿಸಿದರು.

ಜಿಪಂ,ತಾಪಂ ಚುನಾವಣೆಗೆ ತಮ್ಮದೇ ಸಾರಥ್ಯ..,!!
ಮುಂಬರಲಿರುವ ಜಿಲ್ಲಾ ಹಾಗೂ ತಾಲೂಕ ಪಂಚಾಯತ ಚುನಾವಣೆಗಳು ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ತಮ್ಮ ಸಾರಥ್ಯದಲ್ಲಿ ನಡೆಯಲಿದ್ದು, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತಾವು ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು, ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ಪಕ್ಷದ ಅಭಿಮಾನಿಗಳು ಸಹ ಸಂಘಟಿತರಾಗಿ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಲು ಮುಂದಾಗಬೇಕು ಎಂದು ಪಾಟೀಲರು ಮನವಿ ಮಾಡಿದರು.

ಕುಂಠಿತಗೊಂಡಿರುವ ಅಭಿವೃದ್ಧಿ ಕಾರ್ಯಗಳು..!!
ಸ್ಥಳೀಯ ಶಾಸಕರ ನಿರ್ಲಕ್ಷ್ಯತನದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ಶಾಸಕರು ತಮ್ಮ ಹಿಡಿತವನ್ನು ಕಳೆದುಕೊಂಡಿದ್ದಾರೆ, ಇದೇ ಕಾರಣದಿಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬಹಳಷ್ಟು ಕಾಮಗಾರಿಗಳು ಅಸಮರ್ಪಕವಾಗಿ ನಡೆಯುತ್ತಿದ್ದು, ಕ್ಷೇತದಲ್ಲಿ ಯಾವುದೇ ಗಣನೀಯ ಅಭಿವೃದ್ಧಿ ಕಾಣುತ್ತಿಲ್ಲ ಎಂದು ಆರೋಪಿಸಿದ ಅವರು, ಕೋವಿಡ್ ಎರಡನೇ ಅಲೆ ಪ್ರಾರಂಭವಾಗಿದ್ದು, ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ತಾಲೂಕಿನಲ್ಲಿ ಕಂಡು ಬರುತ್ತಿಲ್ಲ ಎಂದು ಆಪಾದಿಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರುಗಳಾದ ದಾನಪ್ಪ ತೋಟದ, ಕರಬಸಪ್ಪ ನಾಯ್ಕರ, ಪುರಸಭೆ ಸದಸ್ಯ ಮಹಮ್ಮದರಫೀಕ್ ಮುದಗಲ್, ಮಾಜಿ ಸದಸ್ಯರುಗಳಾದ ಮಂಜುನಾಥ ಭೋವಿ, ದುರ್ಗೇಶ ಗೋಣೆಮ್ಮನವರ, ಮುಖಂಡರಾದ ಪ್ರಕಾಶ ಬನ್ನಿಹಟ್ಟಿ, ರಮೇಶ ಮೋಟೆಬೆನ್ನೂರ, ಖಾದರಸಾಬ ದೊಡ್ಡಮನಿ, ಪರಶುರಾಮ ಗೆಜ್ಜೆಳ್ಳಿ, ಉದಯ ಚೌಧರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.