ಮತ್ತೆ ಲಾಕ್‍ಡೌನ್ ಸಂಕಷ್ಠ : ತಮ್ಮೂರತ್ತ ಮುಖ, ಬಸ್ ನಿಲ್ದಾಣ ಹೌಸ್ ಪುಲ್

ಹೊಸಪೇಟೆ ಏ27: ಲಾಕ್‍ಡೌನ್ ಸಂಕಷ್ಟದಿಂದ ಹೊರ ಬರುವುದೇ ಹೇಗೆ ಎಂದು ಚಿಂತಿಸುತ್ತಿರುವ ಬೆನ್ನಲ್ಲಿಯೆ ಸರ್ಕಾರ ಮತ್ತೊಮ್ಮೆ 14 ದಿನಗಳ ಲಾಕ್‍ಡೌನ್ ಜಾರಿಗೆ ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ವರ್ಷದ ಲಾಕ್‍ಡೌನ್ ಸಮಯದಲ್ಲಿ ಉದ್ಯೋಗ ನಷ್ಟ, ವೇತನ ಕಡಿತ, ಆರ್ಥಿಕ ಸಂಕಷ್ಟ ಸೇರಿದಂತೆ ನಾನಾ ರೀತಿಯ ತೊಂದರೆ ಅನುಭವಿಸಿದ ಜಿಲ್ಲೆಯ ಜನರಿಗೆ ಮತ್ತೆ ಲಾಕ್‍ಡೌನ್ ಅದೆ ಚಿಂತಗಳತ್ತ ದೂಡಿದೆ.
ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಗೆ ದೇಶ-ವಿದೇಶಿ ಪ್ರವಾಸಿಗರ ಆಗಮನಕ್ಕೆ ಕೊರೊನಾ ಅಡ್ಡಿಯಾಗಿದ್ದು, ಪ್ರವಾಸೋದ್ಯಮ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದ ಜನರ ಬದುಕು ದುಸ್ಥರವಾಗಿದೆ. ಲಾಡ್ಜ್, ಹೋಟೆಲ್ ಉದ್ಯಮ ಸೇರಿದಂತೆ ಸಣ್ಣ-ಪುಟ್ಟ ವ್ಯಾಪಾರಸ್ಥರು ಆರ್ಥಿಕ ಸಂಕಷ್ಟದಿಂದ ಇನ್ನೂ ಹೊರಬರಲಾರಂಭಿಸಿದ್ದಾರೆ ಎನ್ನುವಷ್ಟರಲ್ಲಿಯೇ ಈ ಲಾಕ್‍ಡೌನ್ ಒಂದೊತ್ತಿನ ಊಟಕ್ಕಾಗಿ ಪರದಾಡಿದ ಪ್ರಸಂಗ ನೆನಪಿಸುವಂತೆ ಮಾಡಿದೆ ಆದಾಗ್ಯೂ ದಿನೇ ದಿನೇ ಹೆಚ್ಚಾಗುತ್ತಿರುವ ಸೋಂಕಿನ ಪರಿಣಾಮ ಸರ್ಕಾರವನ್ನು ಅನಿವಾರ್ಯವಾಗಿ ಹೇರುವಂತೆ ಮಾಡಿದೆ.
ಕೊರೊನಾ ಒಂದಡೆ ಪ್ರಾಣ ಹಿಂಡುತ್ತಿದ್ದು, ಲಾಕ್‍ಡೌನ್ ಜನರ ಬದುಕನ್ನು ಕಸಿದುಕೊಳ್ಳುತ್ತಿದೆ. ಲಾಕ್‍ಡೌನ್ ಜಾರಿ ಬೇಡವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದ ಜನರಿಗೆ ಮತ್ತೆ ಲಾಕ್‍ಡೌನ್ ಬಿಸಿ ತುಪ್ಪವಾಗಿ ಪರಿಣಿಮಿಸಿದೆ. ಇನ್ನು ಬೇರಡೆಗಳಿಂದ ಬಂದು ಹೊಸಪೇಟೆ ಸೇರಿದಂತೆ ಸುತ್ತಲೂ ಕಾರ್ಯನಿರ್ವಹಿಸುವ ಕಾರ್ಮಿಕರು ಬದುಕು ಹೇಗಾಗುತ್ತೊ ಏನು ಎಂದು ತಮ್ಮ ಊರುಗಳತ್ತ ಮುಖ ಮಾಡಲಾರಂಭಿಸಿದ್ದು ಹೆಂಡತಿ ಮಕ್ಕಳು ಲಗೇಜ್‍ಗಳ ಸಮೇತ ಸೋಮವಾರ ಸಂಜೆಯಿಂದಲೇ ಮುಖಮಾಡಿದ್ದು ಪ್ರಯಾಣ ಮಾಡಲು ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ತುಂಬಿ ತುಳುಕಲಾರಂಬಿಸಿದ್ದಾರೆ. ಇಲಾಖೆಯು ಹೆಚ್ಚುವರಿ ಬಸ್‍ಗಳ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗುತ್ತಿದ್ದಾರೆ.