ಮತ್ತೆ ರಸ್ತೆಗಿಳಿದ ಜನರು; ಮಾರುಕಟ್ಟೆ, ಪ್ರಮುಖ ವೃತ್ತಗಳಲ್ಲಿ ವಾಹನಗಳ ಆರ್ಭಟ

ದಾವಣಗೆರೆ.ಜೂ.೭: ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ 2ನೇ ಅಲೆಯ ಅಬ್ಬರ ಕೊಂಚ ಇಳಿಮುಖ ಕಂಡಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಳಿತವಾಗುತ್ತಿದೆ. ಈ ಮಧ್ಯೆ ಇಂದು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರಿಂದ ಜನರು ಧಿಡೀರನೆ ರಸ್ತೆಗೆ ಇಳಿದಿದ್ದರು.ಬೆಳಿಗ್ಗೆ 6ರಿಂದ 12 ರವೆರೆಗೆ ಓಡಾಟಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಈ ನಿಟ್ಟಿನಲ್ಲಿ ಹೊರಗೆ ಸುತ್ತಾಡಿ ಬಂದು ಮನೆ ಸೇರಿಕೊಂಡು ಬಿಡೋಣ ಎನ್ನುವ ನೆಪದಲ್ಲೇ ಬಹುತೇಕರು ರಸ್ತೆಗೆ ಇಳಿದ್ದಿದ್ದರೇನೋ ಎನ್ನುವ ಭಾವನೆ ಮೂಡುತ್ತಿತ್ತು. ನಗರದ ಪ್ರಮುಖ ವೃತ್ತಗಳಾದ ವಿದ್ಯಾರ್ಥಿ ಭವನ ಬಳಿಯ ಶಾಂತವೇರಿ ಗೋಪಾಲಗೌಡ ವೃತ್ತ, ಕೆಇಬಿ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಶಿವಯೋಗಿ ಮಂದಿರ ಬಳಿಯ ಜಯದೇವ ವೃತ್ತ, ಪಿ.ಬಿ.ರಸ್ತೆಯಲ್ಲಿನ ಮಹಾತ್ಮಾಗಾಂಧಿ ವೃತ್ತ, ಮಂಡಿಪೇಟಯಲ್ಲಿನ ಜಯಚಾಮರಾಜೇಂದ್ರ ವೃತ್ತ, ಅಂಡರ್ ಬ್ರಿಡ್ಜ್ ಸಮೀಪದ ಲಕ್ಷ್ಮಿ ವೃತ್ತ, ಹಳೇಪೇಟೆಯ ಹಗೇದಿಬ್ಬ ವೃತ್ತ ಸೇರಿದಂತೆ ನಗರದ ಎಲ್ಲಾ ವೃತ್ತಗಳಲ್ಲಿ ಜನರು ಹಾಗೂ ದ್ವಿಚಕ್ರ ವಾಹನ, ಕಾರು ಸೇರಿದಂತೆ ಮತ್ತಿತರೆ ವಾಹನಗಳ ಓಡಾಟ ಲಾಕ್‌ಡೌನ್ ಎನ್ನುವುದನ್ನೇ ಮರೆಸುತ್ತಿತ್ತು.
ನಗರದ ಪ್ರಮುಖ ವೃತ್ತಗಳಿಗೆ ಕೂಡುವ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಮುಚ್ಚಿ ಕೇವಲ ಒಂದೇ ಒಂದು ರಸ್ತೆಯನ್ನು ಮಾತ್ರ ಅಗತ್ಯತೆ ಆಧಾರದ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ದಾವಣಗೆರೆ ಜನತೆ ಇದಾವುದಕ್ಕೂ ಕ್ಯಾರೇ ಎನ್ನದೇ ತಮ್ಮ ಪಾಡಿಗೆ ತಾವು ನಡೆದುಕೊಂಡು, ದ್ವಿಚಕ್ರ ವಾಹನಗಳಲ್ಲಿ, ಮತ್ತು ಅವರವರ ವಾಹನಗಳಲ್ಲಿ ರಾಜಾರೋಷವಾಗಿ ಓಡಾಟ ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬಿಗಿ ಬಂದೋಬಸ್ತ್ ಗಾಗಿ ಪೊಲೀಸರು ಅಲ್ಲಲ್ಲಿ ನಿಂತು ಎಚ್ಚರಿಕೆ ನೀಡುತ್ತಿದ್ದರೂ ಸಹ ಜನರು ಯಾವುದೋ ನೆಪ ಹೇಳಿಕೊಂಡು ಸುಖಾಸುಮ್ಮದೇ ಓಡಾಡುತ್ತಿದ್ದು. ನಗರದ ಪ್ರಮುಖ ವೃತ್ತಗಳು, ರಸ್ತೆಗಳು ವಾಹನಗಳಿಂದ ತುಂಬಿದ್ದವು. ಸಣ್ಣಪುಟ್ಟ ಕಾರಣಗಳಿಗಾಗಿ ಜನರು ಮಹಾಮಾರಿಯ ಅರ್ಭಟವನ್ನೇ ಮರೆತಂತೆ ಕಾಣುತ್ತಿತ್ತು. ನಗರದ ತರಕಾರಿ ಮಾರುಕಟ್ಟೆ, ಎಪಿಎಂಸಿಗಳಲ್ಲಿ ಜನರು ತರಕಾರಿ, ಸೊಪ್ಪು, ದಿನಸಿಗಳನ್ನು ಮತ್ತೆ ಮುಂದೆ  ಸಿಗುತ್ತದೋ, ಇಲ್ಲವೋ ಎನ್ನುವ ಆತುರದಲ್ಲಿ ಮನೆ ಮಂದಿಯಲ್ಲಾ ಬಂದು ಖರೀದಿ ಮಾಡುತ್ತಿದ್ದರು. ತರಕಾರಿ ಮಾರುಕಟ್ಟೆ, ಎಪಿಎಂಸಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಒಂದೆಡೆ ಸೇರದಂತೆ ಎಚ್ಚರಿಕೆ ನೀಡುತ್ತಿದ್ದರು.ಇಂದಿನ  ಪರಿಸ್ಥಿತಿಯನ್ನು ಗಮನಿಸಿದರೆ ಎಂತಹವರಿಗೂ ಗಾಬರಿ ಆಗುತ್ತಿತ್ತು. ಆದರೆ, ತದನಂತರದ ಪರಿಸ್ಥಿತಿಯೇ ಬೇರೆ ಆಗಿತ್ತು. ನಗರದ ಪ್ರಮುಖ ರಸ್ತೆಗಳೇ ಸ್ತಬ್ಧವಾಗಿದ್ದವು.