ಮತ್ತೆ ಯುಗಾದಿ: ಪ್ಲವ ಸಂವತ್ಸರಕ್ಕೆ ಸ್ವಾಗತ ಕೊರೋನ ಗೆಲ್ಲುವ ಭರವಸೆಯಲ್ಲಿ ಕಾವ್ಯಧಾರೆ

ಮಂಗಳೂರು, ಎ.೨೯- ’ಕನ್ನಡ ನಾಡಿನಲ್ಲಿ ಬೇವು-ಬೆಲ್ಲಗಳ ಎರಕ ದೊಂದಿಗೆ ಸಂಭ್ರಮಿಸುವ ಹಬ್ಬ ಯುಗಾದಿ. ತುಳುನಾಡಿನಲ್ಲಿ ಬಿಸುಕಣಿ ಮೂಲಕ ಸೌರಮಾನ ಯುಗಾದಿಯನ್ನು ಆಚರಿಸುವುದು ವಾಡಿಕೆ. ಎರಡರಲ್ಲೂ ಮುಂಬರುವ ಹೊಸ ವರ್ಷ ಹರ್ಷದಾಯಕ ವಾಗಿರಲಿ ಎಂಬ ಆಶಯವೇ ಅಡಗಿದೆ. ಈ ಬಾರಿ ಮಹಾಮಾರಿ ಕೊರೋನಾವನ್ನು ಗೆಲ್ಲುವ ಭರವಸೆಯಲ್ಲಿ ನಾವು ನೂತನ ಪ್ಲವ ಸಂವತ್ಸರವನ್ನು ಸ್ವಾಗತಿಸಬೇಕಾಗಿದೆ’ ಎಂದು ತುಳು – ಕನ್ನಡ ಕವಿ ಮುದ್ದು ಮೂಡುಬೆಳ್ಳೆ ಹೇಳಿದ್ದಾರೆ.
ನಮ್ಮ ಕುಡ್ಲ ಸಂಸ್ಥೆಯ ಬಿಪಿ ಕರ್ಕೇರ ಸಭಾಂಗಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಏರ್ಪಡಿಸಲಾದ ’ಮತ್ತೆ ಯುಗಾದಿ:ಪ್ಲವ ನಾಮ ಸಂವತ್ಸರಕ್ಕೆ ಸ್ವಾಗತ’ ಯುಗಾದಿ ಕವಿಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಕರಾವಳಿಯ ಎಂಟು ಮಂದಿ ಪ್ರಾತಿನಿಧಿಕ ಕವಿಗಳು ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಯುಗಾದಿಯ ಕುರಿತು
ಬರೆದ ಸ್ವರಚಿತ ಕವಿತೆಗಳನ್ನು ಸಾದರಪಡಿಸಿದರು.
ಮತ್ತೆ ಯುಗಾದಿ
ಇದೇ ನೋಡಿ ಚೈತ್ರ ತಂದ ನಲವು ನಮ್ಮ ಭೂಮಿಗೆ
ಅದೋ ಬಂತು ಮತ್ತೆ ಯುಗಾದಿ ಗೆಲುವು ತರಲು ಲೋಕಕೆ |
ವಿಳಂಬಿಯು ವಿಕಾರಿಯು ಶಾರ್ವರಿಯು ತೊಲಗಿತು
ಪುಳಕಗೊಂಡ ಇಳೆಗೆ ಪ್ಲವವು ಹರಿದು ಹಾರಿ ಬಂದಿತು ||
ಎಂಬ ಆಶಯ ಗೀತೆಯೊಂದಿಗೆ ಕಾರ್ಯಕ್ರಮದ ಸಂಯೋಜಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಕವಿ ಮೇಳಕ್ಕೆ ಚಾಲನೆ ನೀಡಿದರು. ಮುದ್ದು ಮೂಡುಬೆಳ್ಳೆ, ಡಾ. ಸುರೇಶ್ ನೆಗಳಗುಳಿ, ರಘು ಇಡ್ಕಿದು, ಡಾ. ಮೀನಾಕ್ಷಿ ರಾಮಚಂದ್ರ, ಸುಧಾ ನಾಗೇಶ್, ಅಕ್ಷಯ ಆರ್. ಶೆಟ್ಟಿ ಪೆರಾರ, ವಿಜಯಲಕ್ಷ್ಮಿ ಕಟೀಲು ಕವಿತೆಗಳನ್ನು ಓದಿದರು. ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಸ್ವಾಗತಿಸಿದರು. ಸುರೇಖ ಶೆಟ್ಟಿ ನಿರೂಪಿಸಿ, ವಂದಿಸಿದರು