ಮತ್ತೆ ಮೋದಿ ಸರ್ಕಾರ: ಸೇಡಂನಲ್ಲಿ ಗೋಡೆ ಬರಹಕ್ಕೆ ಚಾಲನೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಪ್ರತಿ ಮನೆಗೆ ಹೋಗಿ: ಕಾರ್ಯಕರ್ತರಿಗೆ ಶಿವರಾಜ್‍ಸಿಂಗ್ ಚವ್ಹಾಣ್ ಕರೆ

ಕಲಬುರಗಿ:ಫೆ.21: ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ರಚಿಸಲು ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಪ್ರತಿ ಮನೆಗೆ ಹೋಗಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳ ಕುರಿತು ತಿಳಿಹೇಳಬೇಕು ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಷ್ಟ್ರೀಯ ಮುಖಂಡ ಶಿವರಾಜ್‍ಸಿಂಗ್ ಚವ್ಹಾಣ್ ಅವರು ಕರೆ ನೀಡಿದರು.
ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ ಎಂಬ ಘೋಷಣೆಯಡಿ ಸೇಡಂ ಪಟ್ಟಣದಲ್ಲಿ ಬುಧವಾರ ಬಿಜೆಪಿ ಚಿಹ್ನೆಗೆ ಬಣ್ಣ ಲೇಪಿಸುವ ಮೂಲಕ ಗೋಡೆ ಬರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಗೆಲ್ಲಲು ಹಾಗೂ ಕಲಬುರ್ಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿಯೂ ಭರ್ಜರಿ ಜಯ ಸಾಧಿಸಲು ಬಿಜೆಪಿಯ ಪ್ರಮುಖ ಕಾರ್ಯಕರ್ತರು ಬೂತ್ ಮಟ್ಟದಿಂದ ಕೆಲಸ ಪ್ರಾರಂಭಿಸಬೇಕು ಎಂದರು.
ಮೋದಿ ಸರ್ಕಾರವು ಬಡ ಜನರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳ ಕುರಿತು ಪ್ರತಿ ಮನೆ ಬಾಗಿಲಿಗೆ ಕಾರ್ಯಕರ್ತರು ಹೋಗಿ ಸರ್ಕಾರದ ಸಾಧನೆಗಳನ್ನು ವಿವರಿಸಬೇಕು. ಚುನಾವಣೆಯಲ್ಲಿ ಬಿಜೆಪಿ ಪರ ಮತ ಹಾಕಲು ಮನವಿ ಮಾಡಬೇಕು ಎಂದು ಅವರು ಕೋರಿದರು.
ಈ ಸಂದರ್ಭದಲ್ಲಿ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲಗಳ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ, ಕಲಬುರ್ಗಿ ಸಂಸದ ಡಾ. ಉಮೇಶ್ ಜಾಧವ್, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಂಡಲ ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷರೂ ಆದ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಶಾಸಕ ಬಸವರಾಜ್ ಮತ್ತಿಮೂಡ್, ಮುಖಂಡರಾದ ಅಶೋಕ್ ಬಗಲಿ, ಶ್ರೀಮಂತ್ ಅವಂಟಿ, ರಾಘವೇಂದ್ರ ಮೆಕ್ಯಾನಿಕ್, ಶಿವಕುಮಾರ್ ಪಾಟೀಲ್ ತೆಲ್ಕೂರ್ ಮುಂತಾದವರು ಉಪಸ್ಥಿತರಿದ್ದರು.