ಮತ್ತೆ ಮುಂದುವರೆದ ಚಿರತೆ ದಾಳಿ; ಮಹಿಳೆ ಬಲಿ

ತಿ.ನರಸೀಪುರ: ಕಳೆದ ಮೂರು ತಿಂಗಳ ಅವಧಿಯಲ್ಲಿ ಚಿರತೆಯು ಎರಡು ಮುಗ್ಧ ಜೀವಗಳನ್ನು ಬಲಿ ಪಡೆದಿದ್ದು,ಈಗ ತಾಲೂಕಿನ ಕನ್ನಾಯಕನಹಳ್ಳಿ ಗ್ರಾಮದ ಮಹಿಳೆಯ ಮೇಲೆ ದಾಳಿ ನಡೆಸಿ ಬಲಿ ಪಡೆದಿದೆ.ತಾಲೂಕಿನಲ್ಲಿ ಮತ್ತೆ ಚಿರತೆ ದಾಳಿಯು ಮುಂದುವರೆದಿದೆ.

ಕನ್ನಾಯಕನಹಳ್ಳಿ ಗ್ರಾಮದ ನಿಂಗರಾಜುರವರ ಪತ್ನಿ ಸಿದ್ದಮ್ಮ (60) ಎಂಬುವವರು ಚಿರತೆ ದಾಳಿಗೆ ತುತ್ತಾಗಿದ್ದು, ಮಹಿಳೆಯು ಸಂಜೆ 6.30ರ ಸಮಯದಲ್ಲಿ ಸೌದೆ ತರಲು ಹಿತ್ತಲಿಗೆ ಹೋಗಿದ್ದಾಗ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.ಚಿರತೆ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಮಹಿಳೆಯು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ತಾಲೂಕಿನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಚಿರತೆ ದಾಳಿಗೆ ಇದು ಮೂರನೇ ಬಲಿಯಾಗಿದ್ದು, ಆ.30ರಂದು ಉಕ್ಕಲಗೆರೆ ಮಂಜುನಾಥ್, ಡಿ .1ರಂದು ಎಂ.ಕೆಬ್ಬೆಹುಂಡಿಯ ಮೇಘನಾ ಎಂಬುವರನ್ನು ಚಿರತೆ ಆಹುತಿ ಪಡೆದಿತ್ತು. ಮತ್ತೆ ಚಿರತೆ ದಾಳಿ ನಡೆಸಿ ಮತ್ತೊಂದು ಬಲಿ ಪಡೆದಿರುವುದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಚಿರತೆ ದಾಳಿಗೆ ಎರಡು ಜೀವಗಳು ಬಲಿಯಾದ ನಂತರ ಎಚ್ಚೆತ್ತ ಅರಣ್ಯ ಇಲಾಖೆಯು 10 ನುರಿತ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿ ತಾಲೂಕಿನ ಮುತ್ತತ್ತಿ ಗ್ರಾಮದಲ್ಲಿ 3 ವರ್ಷದ ಗಂಡು ಚಿರತೆ ಮತ್ತು ಉಕ್ಕಲಗೆರೆಯ ಮಲ್ಲಪ್ಪ ಬೆಟ್ಟದಲ್ಲಿ 8 ವರ್ಷದ ಮತ್ತೊಂದು ಗಂಡು ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಎರಡು ಚಿರತೆಗಳ ಸೆರೆಯಿಂದ ತಾಲೂಕಿನ ಜನತೆ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈಗ ಮತ್ತೆ ಚಿರತೆ ದಾಳಿ ಮುಂದುವರೆದಿರುವುದರಿಂದ ಜನರಲ್ಲಿ ಆತಂಕ ಹೆಚ್ಚಿದೆ.

ಚಿರತೆ ದಾಳಿಯ ವಿಷಯ ತಿಳಿದ ನಂತರ ಸ್ಥಳಕ್ಕೆ ಧಾವಿಸಿದ ಶಾಸಕರು ಸಂತ್ರಸ್ತ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಸ್ಥಳದಲ್ಲಿ ತಹಶೀಲ್ದಾರ್ ಗೀತಾ ಅರಣ್ಯ ಇಲಾಖೆಯ ಎಸಿಎಫ್ ಲಕ್ಶ್ಮಿಕಾಂತ್ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.