ಮತ್ತೆ ಬ್ಯಾಲೆಸ್ಟಿಕ್ ಕ್ಷಿಪಣಿ ಉಡಾಯಿಸಿದ ಉ.ಕೊರಿಯಾ

ಸಿಯೋಲ್ (ದಕ್ಷಿಣ ಕೊರಿಯಾ), ಜು.೨೫- ಒಂದೆಡೆ ರಷ್ಯಾ-ಉಕ್ರೇನ್ ನಡುವಿನ ಸಮರ ತಾರಕ್ಕೇರುತ್ತಿದ್ದರೆ ಮತ್ತೊಂದೆಡೆ ಅಮೆರಿಕಾ ಹಾಗೂ ಉತ್ತರ ಕೊರಿಯಾ ನಡುವಿನ ಜಂಗಿಕುಸ್ತಿ ಕೂಡ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಅಮೆರಿಕಾದ ಸಬ್‌ಮೆರಿನ್ ದಕ್ಷಿಣ ಕೊರಿಯಾಗೆ ಆಗಮಿಸಿದ್ದನ್ನು ಖಂಡಿಸುವ ಯತ್ನದಲ್ಲಿ ಇದೀಗ ಉತ್ತರ ಕೊರಿಯಾ ಇದೀಗ ಒಂದು ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ತನ್ನ ಪೂರ್ವ ಸಮುದ್ರದ ಭಾಗಕ್ಕೆ ಉಡಾಯಿಸಿದೆ.
ಜಗತ್ತಿನ ಬಲಿಷ್ಠ ನೌಕಾಪಡೆಗಳಲ್ಲಿ ಒಂದಾಗಿರುವ ಅಮೆರಿಕಾ ಜಗತ್ತಿನ ಹಲವು ಕಡೆಗಳಿಗೆ ತನ್ನ ನೌಕೆಗಳನ್ನು ಕಳುಹಿಸುತ್ತಿದ್ದು, ಅದರಂತೆ ಇದೀಗ ಮಿತ್ರ ರಾಷ್ಟ್ರ ದಕ್ಷಿಣ ಕೊರಿಯಾದ ಕರಾವಳಿ ಪ್ರದೇಶಕ್ಕೂ ಕಳುಹಿಸಿದೆ. ಆದರೆ ಅಮೆರಿಕಾದ ಈ ನಿರ್ಣಯದ ವಿರುದ್ಧ ತಿರುಗಿಬಿದ್ದಿರುವ ಉತ್ತರ ಕೊರಿಯಾ, ಇದಕ್ಕೆ ಪ್ರತಿಭಟನೆ ಸೂಚನೆ ಎಂಬಂತೆ ಇದೀಗ ಕನಿಷ್ಠ ಒಂದು ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ತನ್ನ ಪೂರ್ವ ಸಮುದ್ರ ಭಾಗಕ್ಕೆ ಉಡಾಯಿಸಿದೆ. ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸದ ಸಂಗತಿಯನ್ನು ಇಂಡೋ-ಪೆಸಿಫಿಕ್‌ನ ಕಮಾಂಡ್ ಕೂಡ ಖಚಿತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್, ಉತ್ತರ ಕೊರಿಯಾದ ಈ ನಿರ್ಣಯವು ಅಮೆರಿಕಾದ ಸಿಬ್ಬಂದಿ, ಪ್ರಾದೇಶಿಕತೆಗೆ ಹಾಗೂ ನಮ್ಮ ಮಿತ್ರರಾಷ್ಟ್ರಗಳಿಗೆ ಯಾವುದೇ ರೀತಿಯಲ್ಲಿ ತಕ್ಷಣದ ಬೆದರಿಕೆಯನ್ನು ಉಂಟು ಮಾಡುವುದಿಲ್ಲ ಎಂದು ನಿರ್ಣಯಿಸಿದ್ದೇವೆ. ಕ್ಷಿಪಣಿ ಉಡಾವಣೆಗಳು ಉತ್ತರ ಕೊರಿಯಾದ ಅಸ್ಥಿರ ಪರಿಣಾಮವನ್ನು ಎತ್ತಿ ತೋರಿಸುತ್ತವೆ ಎಂದು ಪ್ರತಿಕ್ರಿಯೆ ನೀಡಿದೆ.