ಮತ್ತೆ ಪಾವಗಡ ಜನರ ಸೇವೆ:ತಹಶೀಲ್ದಾರ್ ಬಯಕೆ

ಪಾವಗಡ, ಆ. ೮- ಶನಿಮಹಾತ್ಮ, ಸುಬ್ರಮಣ್ಯೇಶ್ವರಸ್ವಾಮಿ ಅನುಗ್ರಹ ನನ್ನ ಮೇಲಿದ್ದರೆ ಪಾವಗಡ ಜನರ ಸೇವೆ ಮಾಡಲು ಬಯಸುತ್ತೇನೆ ಎಂದು ತಹಶೀಲ್ದಾರ್ ಕೆ.ಎನ್. ಸುಜಾತ ಹೇಳಿದರು.
ಚುನಾವಣಾ ನಿಮಿತ್ತ ಆರು ತಿಂಗಳುಗಳ ಕಾಲ ಪಾವಗಡ ತಹಶೀಲ್ದಾರಾಗಿ ಕರ್ತವ್ಯ ನಿರ್ವಹಿಸಿದ ಸುಜಾತ ರವರು ಕೋಲಾರಕ್ಕೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಾವಗಡ ತಾಲ್ಲೂಕು ಕಚೇರಿಯಲ್ಲಿರುವಂತಹ ಸಿಬ್ಬಂದಿ ಜನಸ್ನೇಹಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ೨೦೨೩ರ ವಿಧಾನಸಭಾ ಚುನಾವಣೆಯಲ್ಲೂ ಸಹ ನಮ್ಮ ಜತೆ ಸೇರಿ ಯಶಸ್ವಿಯಾಗಿ ಚುನಾವಣೆ ನಡೆಸಲು ಸಹಕರಿಸಿದ್ದಾರೆ. ನಮಗೆ ಅದೆಷ್ಟೋ ಸವಾಲುಗಳು ಎದುರಾಗಿದ್ದರು ಸಹ ನಾವು ಅವುಗಳನ್ನೆಲ್ಲ ಮೆಟ್ಟಿ ಯಶಸ್ವಿಯಾಗಿ ಚುನಾವಣೆ ನಡೆಸಿದ್ದು ಖುಷಿ ವಿಚಾರ. ಪಾವಗಡದ ಶನಿಮಹಾತ್ಮ ಹಾಗೂ ನಾಗಲಮಡಿಕೆಯ ಸುಬ್ರಮಣ್ಯೇಶ್ವರ ಸ್ವಾಮಿಯ ಅನುಗ್ರಹ ನನ್ನ ಮೇಲಿದ್ದರೆ ಮತ್ತೆ ನಾನು ಪಾವಗಡ ತಾಲ್ಲೂಕಿನ ಜನರ ಸೇವೆ ಮಾಡಲು ಬಯಸುತ್ತೇನೆ ಎಂದರು.
ತಹಶೀಲ್ದಾರ್ ಡಿ.ಎನ್. ವರದರಾಜು ಮಾತನಾಡಿ, ಚುನಾವಣಾ ಸಮಯದಲ್ಲಿ ವರ್ಗಾವಣೆ ಎನ್ನುವುದು ಸಹಜ. ಅದೇ ರೀತಿ ನಾನು ಮಂಡ್ಯ ಜಿಲ್ಲೆಗೆ ವರ್ಗಾವಣೆಯಾಗಿದ್ದೆ. ಕೆಜಿಎಫ್‌ನ ತಹಶೀಲ್ದಾರ್ ಆಗಿದ್ದ ಸುಜಾತ ರವರು ಪಾವಗಡಕ್ಕೆ ತಹಶೀಲ್ದಾರ್ ಆಗಿ ಆಗಮಿಸಿದ್ದರು ಅವರ ಜತೆ ಉತ್ತಮ ರೀತಿಯಲ್ಲಿ ಸಹಕರಿಸಿ ಚುನಾವಣೆ ನಡೆಸಿದ್ದೀರಾ ಈ ಹಿಂದೆ ನಾನು ಪಾವಗಡದ ತಹಶೀಲ್ದಾರ್ ಆಗಿದ್ದಾಗ ಯಾವ ರೀತಿ ಸಹಕಾರ ನೀಡಿದ್ದರು ಈಗ ಅದಕ್ಕಿಂತ ಹೆಚ್ಚಿನ ಸಹಕಾರ ನೀಡಿ ಉತ್ತಮ ಆಡಳಿತ ನಡೆಸಲು ಮುಂದಾಗೋಣ. ಸುಜಾತ ರವರ ಪಯಣ ಸುಗಮವಾಗಿರಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಗ್ರೇಡ್-೨ ಎನ್. ಮೂರ್ತಿ, ಆರ್.ಐ. ಗಳಾದ ರಾಜಗೋಪಾಲ್, ಕಿರಣ್‌ಕುಮಾರ್, ರವಿಕುಮಾರ್, ಎ.ಡಿ.ಎಲ್.ಆರ್ ರುದ್ರೇಶ್, ಸರ್ವೇ ಮೇಲ್ವಿಚಾರಕರಾದ ಕೃಷ್ಣ ಆರ್.ಆರ್.ಟಿ ಶಿರಸ್ತೆದಾರ್ ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಶಂಶುದ್ಧ, ಗ್ರಾಮ ಸಹಾಯಕರ ಅಧ್ಯಕ್ಷ ರಂಜಿತ್, ರಾಜೇಶ್, ಆಸೀಪ್, ಹರ್ಷಿತಾ, ಸುಗುಣಾ, ಸುಬ್ಬಲಕ್ಷ್ಮಮಮ್ಮ, ರವಿಕುಮಾರ್, ತಿಮ್ಮಾರೆಡ್ಡಿ, ಕಿರಣ್, ರಾಮಾಂಜಿ ಮತ್ತಿತರರು ಉಪಸ್ಥಿತರಿದ್ದರು.