ಮತ್ತೆ ಚರ್ಚೆಯ ಮುನ್ನೆಲೆಗೆ ಬಂದ ಸೋನಿಯಾ ಗಾಂಧಿ ವಿರುದ್ಧದ ಎಫ್ಐಆರ್ ಪ್ರಕರಣ!

ಶಿವಮೊಗ್ಗ, ಮಾ. 24: ಕಳೆದ ವರ್ಷ ಮೇ ತಿಂಗಳಲ್ಲಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ
ವಿರುದ್ದ ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ
ಎಫ್.ಐ.ಆರ್. ಪ್ರಕರಣ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.
ಸೋನಿಯಾ ಗಾಂಧಿ ವಿರುದ್ದ ಎಫ್.ಐ.ಆರ್ ದಾಖಲಾಗಿ, ಸರಿಸುಮಾರು 10 ತಿಂಗಳುಗಳೇ
ಕಳೆದಿದೆ. ಆದರೆ ಇಲ್ಲಿಯವರೆಗೂ ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ಆರೋಪಪಟ್ಟಿ (ಚಾರ್ಜ್
ಶೀಟ್) ಯಾಗಲಿ ಅಥವಾ ಬಿ ವರದಿಯಾಗಲಿ ಸಲ್ಲಿಸಿಲ್ಲ. ಈ ನಡುವೆ ಕಾಂಗ್ರೆಸ್ ಪಕ್ಷವು,
ಸೋನಿಯಾ ವಿರುದ್ದ ಪ್ರಕರಣದ ಕುರಿತಂತೆ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಹಾಕುವಂತೆ
ಪಟ್ಟು ಹಿಡಿದಿದೆ. ಮತ್ತೊಂದೆಡೆ, ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುವುದು
ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಜನಾಕ್ರೋಶ’ ಸಮಾವೇಶದಲ್ಲಿ
ಭಾಗವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು, ಈ ಪ್ರಕರಣದ ಬಗ್ಗೆ
ಮಾತನಾಡಿದ್ದರು. ‘ಸೋನಿಯಾ ಗಾಂಧಿ ವಿರುದ್ದದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ ಚರ್ಚಿಸಲಾಗಿತ್ತು. ಎಫ್ಐಆರ್
ರದ್ದುಗೊಳಿಸುವ ಭರವಸೆ ನೀಡಿದ್ದರು. ಪೊಲೀಸ್ ಇಲಾಖೆ ಬಿ ವರದಿ ಹಾಕುವುದಾಗಿ
ತಿಳಿಸಿತ್ತು. ಆದರೆ ಇಲ್ಲಿಯವರೆಗೂ ಇವ್ಯಾವ ಕ್ರಮಗಳು ಆಗಿಲ್ಲ. ಇಷ್ಟರಲ್ಲಿಯೇ ಪಕ್ಷದ
ವೇದಿಕೆಯಲ್ಲಿ ಈ ಬಗ್ಗೆ ಚರ್ಚಿಸಿ, ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು’
ಎಂದು ಹೇಳಿದ್ದರು.