ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಮ್ಮ ಸಂಘಟನೆ ನಿರಂತರ

ಕೆ.ಆರ್.ನಗರ, ಜ.17:- ನಮ್ಮ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಜಾರಿಗೆ ತಂದ ಜನಪ್ರಿಯ ಯೋಜನೆಗಳ ಬಗ್ಗೆ ಹಾಗೂ ಬಿಜೆಪಿ ಸರ್ಕಾರದ ದುರಾಡಳಿತವನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಜನರಲ್ಲಿ ಮನವರಿಕೆ ಮಾಡುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಮ್ಮ ಸಂಘಟನೆ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್‍ನ ಜಿಲ್ಲಾಧ್ಯಕ್ಷ ಪಿ.ಮಲ್ಲೇಶ್ ಕೋಟೆ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಇಡಿ ದೇಶದಲ್ಲೇ ಪಂಚಾಯತ್ ರಾಜ್ ಹೆಸರಿನಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದವರು ದಿ.ರಾಜೀವ್ ಗಾಂಧಿಯವರು. ಈ ಮೂಲಕ ನಾವೆಲ್ಲ ಇಂದು ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರು, ಅಧ್ಯಕ್ಷರಾಗಲು ಕಾರಣರಾಗಿದ್ದಾರೆ. ಆದ್ದರಿಂದ ಅವರ ಹೆಸರಿನಲ್ಲೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ನಡಿಗೆ ಗ್ರಾಮ ಪಂಚಾಯಿತಿಗಳ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ಪ್ರತಿ ಗ್ರಾಮಗಳಿಗೆ ತೆರಳಿ ಪಂಚಾಯತ್ ರಾಜ್ ವ್ಯವಸ್ಥೆಯ ಕಲ್ಪನೆಯನ್ನು ಎಲ್ಲರಿಗು ಮನವರಿಕೆ ಮಾಡಿಕೊಡುವ ಜತೆಗೆ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದೇಶ ಪ್ರೇಮದ ಹೆಸರಿನಲ್ಲಿ ಯುವಕರನ್ನ ಹುಚ್ಚೆಬ್ಬಿಸಿ ಮಂತ್ರಮುಗ್ಧರಾಗಿ ಮಾಡಿ ಮತಗಳಾಗಿ ಪರಿವರ್ತನೆ ಮಾಡಿಕೊಳ್ಳುತ್ತಿರುವ ಬಿಜೆಪಿ ಸಾರ್ವಜನಿಕ ಸಂಸ್ಥೆಗಳನೆಲ್ಲಾ ಖಾಸಗಿಯವರಿಗೆ ಅಡವಿಟ್ಟು ಯುವಕರಿಗೆ ಉದ್ಯೋಗ ನೀಡದೆ ಮೋಸ ಮಾಡುತ್ತಿದೆ. ಮತ್ತು ಚುನಾವಣೆ ವ್ಯವಸ್ಥೆ ಹದಗೆಡಲು ಕಾರಣವಾಗಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವ ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು ಎಂದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ 165 ಭರವಸೆಗಳನ್ನ ರಾಜ್ಯದ ಜನಕ್ಕೆ ನೀಡಿದ್ದರು ಅದರಲ್ಲಿ 160 ಭರವಸೆಗಳನ್ನ ಹಿಡೇರಿಸಿದರು. ಮತ್ತೊಮ್ಮೆ ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಬೇಕು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದ ಶಾಸಕ ಸಾ.ರಾ,ಮಹೇಶ್‍ರವರನ್ನು ಕೈಬಿಟ್ಟು ನಮ್ಮ ಪಕ್ಷದ ಅಭ್ಯರ್ಥಿ ಡಿ.ರವಿಶಂಕರ್‍ರನ್ನು ಮತದಾರರು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಮಿತಿ ಅಧ್ಯಕ್ಷ ವಾಸಿಂ ಪಾಷಾ, ಕಾರ್ಯದರ್ಶಿ ರವಿ, ಮಹಿಳಾ ಸಮಿತಿ ಅಧ್ಯಕ್ಷೆ ಸುನಿತಾ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.