ಮತ್ತಷ್ಟು ಹೊಳೆಯಲಿದೆ ತಾಜ್‌ಮಹಲ್!

ಆಗ್ರಾ, ಏ. ೨೦ : ವಿಶ್ವವಿಖ್ಯಾತ ತಾಜ್’ಮಹಲ್ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳಿಸಲು ಪ್ರಾಚ್ಯವಸ್ತು ಸಂಶೋಧನಾ (ಎ.ಎಸ್.ಐ.) ಇಲಾಖೆ ಮುಂದಾಗಿದೆ. ಇದಕ್ಕಾಗಿ ತಾಜ್’ಮಹಲ್’ಗೆ ‘ಮಡ್ ಪ್ಯಾಕ್’ ವ್ಯವಸ್ಥೆ ಮಾಡುತ್ತಿದೆ!
ಸದ್ಯ ದೇಶಾದ್ಯಂತ ಕೊರೊನಾ ಸೋಂಕು ಏರುಗತಿಯಲ್ಲಿ ಸಾಗುತ್ತಿದೆ. ಈ ಕಾರಣದಿಂದ ತಾಜ್’ಮಹಲ್ ಸೇರಿದಂತೆ ಹಲವು ಐತಿಹಾಸಿಕ ತಾಣಗಳ ಪ್ರವೇಶದ ತಾತ್ಕಾಲಿಕ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಈ ಸಮಯದ ಸದ್ಭಳಕೆ ಮುಂದಾಗಿರುವ ಎ.ಎಸ್.ಐ. ಸಂಸ್ಥೆಯು, ತಾಜ್’ಮಹಲ್’ನ ಬಿಳಿ ಹೊಳಪನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಕಾರ್ಯಕ್ಕೆ ಮುಂದಾಗಿದೆ.
ಹಾಗೆಯೇ ತಾಜ್’ಮಹಲ್ ಬಳಿಯ ರಾಯಲ್ ಗೇಟ್ ಬಳಿ, ಸವೆದು ಹೋಗಿರುವ ಕಲ್ಲು ಬದಲಾಯಿಸಲು ಕ್ರಮಕೈಗೊಳ್ಳಲಾಗಿದೆ. ಜೊತೆಗೆ ಗೋಪುರದ ಸಂರಕ್ಷಣೆಗೆ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ‘ಮಡ್‌ಪ್ಯಾಕ್’ ಚಿಕಿತ್ಸೆ ನಡೆಸಲು ನಿರ್ಧರಿಸಲಾಗಿದೆ.
ಏನೀದು?: ಮಡ್’ಪ್ಯಾಕ್ ಚಿಕಿತ್ಸೆಯು ಮಣ್ಣಿನ ಲೇಪನವಾಗಿದೆ. ಈ ಪೇಸ್ಟ್’ನ್ನು ಕಲ್ಲಿನ ಮೇಲೆ ಹಚ್ಚಿ ನಂತರ ನೀರಿನಿಂದ ತೊಳೆಯಲಾಗುತ್ತದೆ. ಈ ರೀತಿಯ ಶುಚಿಯಿಂದ ತಾಜ್’ಮಹಲ್ ಸೌಂದರ್ಯ ಮತ್ತಷ್ಟು ಹೊಳೆಯಲಿದೆ ಎಂದು ಎ.ಎಸ್.ಐ ಸಂಸ್ಥೆ ಅಭಿಪ್ರಾಯ ಪಡುತ್ತದೆ.
ಸಂರಕ್ಷಣೆ: ಇದೇ ವೇಳೆ ಗೋಪುರಗಳ ಸಂರಕ್ಷಣೆ ಕಾರ್ಯ ಕೂಡ ನಡೆಯಲಿದೆ. ಇದಕ್ಕಾಗಿ ಸುಮಾರು ೨೩ ಲಕ್ಷ ರೂ. ಮೊತ್ತದ ಕ್ರಿಯಾ ಯೋಜನೆ ರೂಪಿಸಲಾಗಿದೆ.
ಗೋಪುರದ ನಾಶವಾದ ಕಲ್ಲುಗಳು ಹಾಗೂ ಬಣ್ಣ ಬದಲಾದ ಕಲ್ಲುಗಳನ್ನು ಬದಲಾಯಿಸಲು ಕ್ರಮಕೈಗೊಳ್ಳಲಾಗಿದೆ. ಇದೇ ವೇಳೆ ತಾಜ್’ಮಹಲ್’ನ ನೈರುತ್ಯ ಗೋಪುರದ ಸಂರಕ್ಷಣಾ ಕಾರ್ಯವನ್ನು ವೇಗವಾಗಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.
ನಿರ್ಮಾಣ: ತಾಜ್’ಮಹಲ್ ನಿರ್ಮಾಣ ವೇಳೆ, ನಾಲ್ಕು ಗೋಪುರಗಳನ್ನು ಅದರ ನಾಲ್ಕು ಮೂಲೆಗಳಲ್ಲಿ ನಿರ್ಮಿಸಲಾಗಿದೆ. ಪ್ರತಿ ಗೋಪುರವು ನೆಲದಿಂದ ೪೨.೯೫ ಮೀಟರ್ ಅಥವಾ ೧೪೦.೯೧ ಅಡಿ ಎತ್ತರದಲ್ಲಿದೆ. ತಾಜ್’ಮಹಲ್‌ನಲ್ಲಿ ಬಳಸಿದ ಅಮೃತಶಿಲೆಯನ್ನು ಈ ಗೋಪುರಗಳಲ್ಲಿಯೂ ಬಳಸಲಾಗಿದೆ. ಈ ಗೋಪುರಗಳು ತಾಜ್ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ.