ಮತೋತ್ಸವ

ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಮತದಾರರು ಬೆಳಿಗ್ಗೆಯೇ ಉತ್ಸಾಹದಿಂದ ಮತ ಹಾಕುತ್ತಿದ್ದು, ಬೆಂಗಳೂರಿನ ಮತಗಟ್ಟೆಯಲ್ಲಿ ಮತದಾನದ ಹಕ್ಕು ಚಲಾಯಿಸಲು ದೊಡ್ಡ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತಿರುವ ಮತದಾರರು.

ಬೆಂಗಳೂರು,ಮೇ೧೦:ರಾಜ್ಯ ವಿಧಾನಸಭೆಗೆ ಇಂದು ನಡೆದಿರುವ ಮತದಾನ ಬಹುತೇಕ ಶಾಂತಿಯುತವಾಗಿದ್ದು, ಮತದಾರರು ಉತ್ಸಾಹದಿಂದ ಮತಚಲಾಯಿಸಿದರು. ಮತಯಂತ್ರ ದೋಷ, ಮತದಾನ ಬಹಿಷ್ಕಾರ, ಒಂದೆರೆಡು ಕಡೆ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿಯಂತಹ ಕೆಲವು ಸಣ್ಣಪುಟ್ಟ ಘಟನೆಗಳು ಹೊರತುಪಡಿಸಿದರೆ. ಮತದಾನ ಸುಗಮವಾಗಿ, ಶಾಂತಿಯುತವಾಗಿ ಸಾಗಿದೆ. ಎಲ್ಲೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.
ರಾಜ್ಯದ ಎಲ್ಲ ೨೨೪ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆ ೭ ಗಂಟೆಗೆ ಮತದಾನ ಆರಂಭವಾಗಿದ್ದು, ಮತದಾರರು ಭಾರಿ ಉತ್ಸಾಹದಿಂದ ಮತ ಚಲಾಯಿಸುತ್ತಿದ್ದು, ಬೆಳಿಗ್ಗೆಯೇ ಮತಗಟ್ಟೆಗೆ ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ರಾಜ್ಯದ ಎಲ್ಲ ಮತಗಟ್ಟೆಗಳಲ್ಲೂ ಬೆಳಿಗ್ಗೆಯೇ ಬಿರುಸಿನ ಮತದಾನ ನಡೆದಿದ್ದು, ಮಧ್ಯಾಹ್ನ ೨ ಗಂಟೆ ವೇಳೆಗೆ ಶೇ. ೪೦ ರಿಂದ ೪೫ ರಷ್ಟು ಮತದಾನ ಆಗಿದೆ ಎಂದು ಹೇಳಲಾಗಿದೆ. ಮತದಾರರನ್ನು ಮತಗಟ್ಟೆಗೆ ಸೆಳೆಯುವ ಚುನಾವಣಾ ಆಯೋಗದ ಪ್ರಯತ್ನಗಳು ಯಶಸ್ವಿಯಾಗಿದ್ದು, ಬೆಂಗಳೂರು ನಗರ ಸೇರಿದಂತೆ ಎಲ್ಲರೂ ಬೆಳ್ಳಂಬೆಳಿಗ್ಗೆಯೇ ಮತದಾರರು ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ, ಮತ ಹಾಕಿ ಪ್ರಜಾತಂತ್ರದ ಹಬ್ಬಕ್ಕೆ ಜೈ ಎಂದಿದ್ದಾರೆ.
ರಾಜ್ಯದ ಬೆರಳೆಣಿಕೆಯಷ್ಟು ಮತಗಟ್ಟೆಗಳಲ್ಲಿ ಮತಯಂತ್ರದ ದೋಷದಿಂದ ಮತದಾನ ವಿಳಂಬವಾಗಿದೆ. ಅದು ಬಿಟ್ಟರೆ ಉಳಿದ ಎಲ್ಲೆಡೆ ಮತದಾನ ಬಿರುಸಿನಿಂದ, ಶಾಂತಿಯುತವಾಗಿ ನಡೆದಿದೆ.
ಬಿಗಿಬಂದೋಬಸ್ತ್ ಅಹಿತಕರ ಘಟನೆ ಇಲ್ಲ
ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲ ವ್ಯವಸ್ಥೆ ಮಾಡಿದ್ದು, ಮತದಾನ ಸಂದರ್ಭದಲ್ಲಿ ಮಧ್ಯಾಹ್ನದವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಎಲ್ಲ ಮತಗಟ್ಟೆಗಳಲ್ಲೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಬಿಗಿ ಭದ್ರತೆಯಲ್ಲಿ ಮತದಾನ ನಡೆದಿದೆ.
ಮತದಾನ ಬಹಿಷ್ಕಾರ-ಮನವೊಲಿಕೆ
ಚಾಮರಾಜನಗರ ಗುಂಡ್ಲುಪೇಟೆ ಕ್ಷೇತ್ರದಲ್ಲಿರುವ ರಾಜ್ಯದ ಗಡಿಭಾಗದ ಕಟ್ಟಕಡೆಯ ಕಾಡಂಚಿನ ಗ್ರಾಮ ಚಿಕ್ಕೆಎಲೆಚೆಟ್ಟಿ ಗ್ರಾಮದ ಗ್ರಾಮಸ್ಥರು ಹಳ್ಳಿಗೆ ಮೂಲಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿದ್ದು, ಗ್ರಾಮಸ್ಥರನ್ನು ಮನವೊಲಿಸುವ ಕೆಲಸವನ್ನು ಅಧಿಕಾರಿಗಳು ನಡೆಸಿದ್ದಾರೆ. ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲ, ಮಕ್ಕಳು ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ. ಕಾಡು ಪ್ರಾಣಿಯ ಹಾವಳಿ ಹೆಚ್ಚಾಗಿದ್ದು, ಬೆಳಿಗ್ಗೆ, ಸಂಜೆ ಮನೆಯಿಂದ ಹೊರ ಬರಲು ಆಗುತ್ತಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಸಮಸ್ಯೆ ಪರಿಹರಿಸುವ ಆಶ್ವಾಸನೆ ಸಿಗುತ್ತಿದೆ. ಯಾವುದೇ ಭರವಸೆ ಈಡೇರಿಲ್ಲ ಎಂದು ಗ್ರಾಮಸ್ಥರು ಮತದಾನದಿಂದ ದೂರ ಉಳಿದಿದ್ದಾರೆ. ಇದುವರೆಗೂ ಈ ಗ್ರಾಮದ ಮತಗಟ್ಟೆಯಲ್ಲಿ ಒಂದೂ ಮತವೂ ಚಲಾವಣೆಯಾಗಿಲ್ಲ ಎನ್ನಲಾಗಿದೆ.
ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದ ಏಳಿಗೆಹುಂಡಿ ಗ್ರಾಮದ ಮತದಾರರು ಗ್ರಾಮಕ್ಕೆ ರಸ್ತೆ ಮಾಡಿಕೊಟ್ಟಿಲ್ಲ ಎಂದು ಮತದಾನ ಬಹಿಷ್ಕಾರ ಮಾಡಿದ್ದು, ಮತದಾರರನ್ನು ಮತದಾನಕ್ಕಾಗಿ ಅಧಿಕಾರಿಗಳು ಮನವೊಲಿಸುವ ಕೆಲಸ ಮಾಡಿದ್ದಾರೆ.
ಇವಿಎಂ ತಾಂತ್ರಿಕ ತೊಂದರೆ
ಹೆಚ್‌ಡಿಕೋಟೆ ತಾಲ್ಲೂಕಿನ ಹಂಪಾಪುರ ಸಮೀಪದ ಚೆಕ್ಕೂರು ಗ್ರಾಮದ ಮತಗಟ್ಟೆಯಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಮತಯಂತ್ರ ಸರಿಪಡಿಸಿದ ನಂತರ ಮತದಾನ ವಿಳಂಬವಾಗಿ ಆರಂಭವಾಗಿದೆ.
ಹುಬ್ಬಳ್ಳಿ-ಧಾಋವಾಡ ಸೆಂಟ್ರಲ್ ಕ್ಷೇತ್ರದ ಮತಗಟ್ಟೆ ಸಂಖ್ಯೆ-೬೭ ಮತ್ತು ಬೆಂಗಳೂರಿನ ಯಶವಂತಪುರದ ರೋಟರಿ ಮತಗಟ್ಟೆಯಲ್ಲಿ ಮತದಾನ ೭ ಗಂಟೆಗೆ ಆರಂಭವಾಗದೆ, ತಡವಾಗಿದ್ದಕ್ಕೆ ಮತದಾರರು ಮತಗಟ್ಟೆ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಗೊರವಿನಗೊಂಡನಹಳ್ಳಿಯಲ್ಲೂ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು, ಮತದಾನ ತಡವಾಗಿದೆ. ಬಳ್ಳಾರಿಯ ಸಂಗನಕಲ್ಲಿನಲ್ಲೂ ಮತಯಂತ್ರದಲ್ಲಿ ದೋಷ ಕಂಡುಬಂದು ಮತದಾನ ತಡವಾಯಿತು.
ರಾಯಚೂರಿನ ಪಿಂಕ್ ಮತಗಟ್ಟೆಯಲ್ಲೀ ತಾಂತ್ರಿಕ ದೋಷದಿಂದ ಮತದಾನ ತಡವಾಗಿ ಆರಂಭವಾಯಿತು. ಕನಕಗಿರಿ ಕ್ಷೇತ್ರದ ಮುಸ್ಟೂರು ಕ್ಯಾಂಪ್‌ನ ಬೂತ್‌ನಲ್ಲಿ ಇವಿಎಂ ದೋಷದಿಂದ ಮತದಾನ ತಡವಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ದೋನಹಳ್ಳಿ ಗ್ರಾಮದವರು, ಗ್ರಾಮಕ್ಕೆ ಮೂಲ ಸೌಕರ್ಯವಿಲ್ಲವೆಂದು ಮತದಾನ ಬಹಿಷ್ಕರಿಸಿದ್ದಾರೆ.
ಕೆಲವೆಡೆ ಕಾರ್ಯಕರ್ತರ ನಡುವೆ ಸಂಘರ್ಷ ಕಲಬುರಗಿ ಉತ್ತರ ಮತಕ್ಷೇತ್ರದ ಗೋಲಾಚೌಕ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಪೊಲೀದರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಬಳ್ಳಾರಿಯ ಸಂಜೀವನರಾಯ ಕೋಟೆಯಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ತಲೆಗೆ ಗಾಯವಾಗಿದೆ. ಪೊಲೀಸರು ಪ್ರಯತ್ನದಿಂದ ಪರಿಸ್ಥಿತಿ ತಿಳಿಯಾಗಿದೆ.