ಮತೀಯ ಶಕ್ತಿಗಳನ್ನು ಸಹಿಸಲ್ಲ

ಸಮಾಜದ ಸ್ವಾಸ್ತ್ಯ ಕದಡುವವರ ವಿರುದ್ಧ ಕ್ರಮ, ಸುಳ್ಳು ಸುದ್ಧಿಗಳ ಮೇಲೂ ನಿಗಾಕ್ಕೆ-ಸಿಎಂ ತಾಕೀತು

ಬೆಂಗಳೂರು,ಜ.೧೬-ಬರುವ ಲೋಕಸಭಾ ಚುನಾವಣೆ ವೇಳೆ ಸಮಾಜದ ಸ್ವಾಸ್ತ್ಯಕದಡುವ ಮತೀಯ ಶಕ್ತಿಗಳ ಮೇಲೆ ನಿಗಾ ವಹಿಸಿ, ಸುಳ್ಳು ಸುದ್ದಿಗಳನ್ನು ಹರಡಿ ಲಾಭ ಪಡೆಯುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ನೃಪತುಂಗ ರಸ್ತೆಯ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಪರಾಮರ್ಶೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಮಲಲ್ಲಾ ಪ್ರತಿಷ್ಠಾಪನೆ, ಲೋಕಸಭಾ ಚುನಾವಣೆ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ವೇಳೆ ಕೋಮು ಗಲಭೆಗಳು ನಡೆಯದಂತೆ ಪೊಲೀಸ್ ಠಾಣಾ ಮಟ್ಟದಲ್ಲಿ ಮಾಹಿತಿಯನ್ನು ಕಲೆಹಾಕಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಶಾಲಾ-ಕಾಲೇಜುಗಳಿಗೆ ಹುಸಿಬಾಂಬ್ ಬೆದರಿಕೆಯ ಮೂಲ ಪತ್ತೆಹಚ್ಚಿ ಮಕ್ಕಳು ಪೋಷಕರಲ್ಲಿನ ಆತಂಕ ನಿವಾರಣೆ ಮಾಡಬೇಕು ಅತ್ಯಾಧುನಿಕ ತಂತ್ರಜ್ಞಾನದ ನೆರವು ಪಡೆದಿ ಇಮೇಲ್ ಬೆದರಿಕೆಗಳನ್ನು ಮಟ್ಟಹಾಕಲು ಮುಂದಾಗುವಂತೆ ಎಂದು ಸೂಚನೆ ನೀಡಲಾಗಿದೆ ಎಂದರು.
ಹಾವೇರಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ಗಿರಿ ನೆಪದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿ ಯಾರೂ ಕೂಡ ಕಾನೂನು ಕೈಗೆತ್ತಿಕೊಂಡು ಮಹಿಳೆಯರ ಮೇಲೆ ದೌರ್ಜನ್ಯ ನಡೆಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಿದರು.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಖಾಸಗಿ ಶಾಲಾ-ಕಾಲೇಜುಗಳಿಗೆ ಹುಸಿ ಬಾಂಬ್ ಇ-ಮೇಲ್ ಪತ್ತೆ ಕಾರ್ಯದ ಬಗ್ಗೆ ಪೊಲೀಸ್ ಅಧಿಕಾರಿಗಳಲ್ಲಿ
ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಲಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಸಭೆಯಲ್ಲಿ ನಗರದಲ್ಲಿನ ಪಬ್, ಬಾರ್‌ಗಳ ಮಾಹಿತಿ ಕಲೆ ಹಾಕಲ ಬೆಂಗಳೂರು ನಗರಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಸಂಚಾರ ದಟ್ಟಣೆ ಕುರಿತು ಪೊಲೀಸರು ಕೈಗೊಂಡ ಕ್ರಮಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಲೆ ಹಾಕಿ ಕೆಲ ಸಲಹೆಗಳನ್ನು ನೀಡಿದರು ಎಂದು ಮೂಲಗಳು ತಿಳಿಸಿವೆ.
ಹಾವೇರಿಯ ಹಾನಗಲ್‌ನಲ್ಲಿ ನೈತಿಕ ಪೊಲೀಸ್‌ಗಿರಿ ನೆಪದಲ್ಲಿ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳಿವೆ. ಆರೋಪಿಗಳನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಇದರ ಬಗ್ಗೆ ಸೂಕ್ತ ಉತ್ತರ ಕೊಡಲು ಅಧಿಕಾರಿಗಳ ಸಭೆಯಲ್ಲಿ ಸಿದ್ದರಾಮಯ್ಯ ಮಾಹಿತಿ ಕಲೆ ಹಾಕಿದ್ದಾರೆ.
ಸಭೆಗೂ ಮುನ್ನ ಪೊಲೀಸ್ ಇಲಾಖೆಯ ಅಧುನಿಕ ಉಪಕರಣಗಳ ಪರಿಶೀಲನೆ ಬಾಂಬ್ ನಿಷ್ಕ್ರಿಯ ವಾಹನಗಳಿಗೆ ಚಾಲನೆ, ಮೊಬೈಲ್ ಕಮಾಂಡ್ ಸೆಂಟರ್ ವಾಹನ ಮತ್ತು ಎಫ್‌ಎಸ್‌ಎಲ್ ಮೊಬೈಲ್ ವಾಹನಗಳನ್ನು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಪರಿಶೀಲನೆ ನಡೆಸಿದರು.
ಈ ವಾಹನಗಳು ಮತ್ತು ಅದರಲ್ಲಿನ ಅತ್ಯಾಧುನಿಕ ಉಪಕರಣಗಳ ಬಳಕೆ ಮತ್ತು ತನಿಖೆಗೆ ಯಾವ ರೀತಿಯಲ್ಲಿ ಸಹಕಾರ ಆಗಲಿವೆ ಎಂಬುದರ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಡಿಜಿಪಿಗಳಾದ ಕಮಲ್ ಪಂತ್,ಪ್ರಶಾಂತ್ ಕುಮಾರ್ ಠಾಕೂರ್, ಎಂ.ಎ.ಸಲೀಂ,ರಾಮಚಂದ್ರರಾವ್ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಭಾಗವಹಿಸಿದ್ದರು.

ಜಾತಿ ಬಳಕೆ ಬೇಡ:ಸಿಎಂ
ಪೊಲೀಸ್ ಅಧಿಕಾರಿಗಳು ವರ್ಗಾವಣೆಗಳಿಗೆ ಹಾತೊರೆಯುವುದು, ಜಾತಿ ಬಳಸುವುದು ಅತ್ಯಂತ ಕೆಟ್ಟದ್ದು. ಹಾಗೆ ಮಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಕಿವಿಮಾತು ಹೇಳಿದರು.
ಬೆಂಗಳೂರಿನ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿಂದು ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮದು ಜಾತ್ಯಾತೀತ ರಾಷ್ಟ್ರ. ನಾವುಗಳೇ ನಮ್ಮ ಸಂವಿಧಾನದ ಆಶಯಗಳನ್ನು ಬಲಪಡಿಸಬೇಕು ಎಂದರು.
ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರೆ ಗಸ್ತು ವ್ಯವಸ್ಥೆ, ಹೊಯ್ಸಳ ವ್ಯವಸ್ಥೆ, ಸಿಬ್ಬಂದಿ ಮತ್ತು ಠಾಣಾಧಿಕಾರಿಗಳು ಇದನ್ನು ತಡೆಯಲು ವಿಫಲಾರಾಗಿದ್ದರೆ ಎಂದರ್ಥ. ಅಪರಾದ ಪ್ರಕರಣಗಳು ಹೆಚ್ಚಾದರೆ ಇದಕ್ಕೆ ಸಂಬಂಧಿಸಿದ ಡಿಸಿಪಿಗಳನ್ನು ಹೊಣೆ ಮಾಡುವ ಎಚ್ಚರಿಕೆಯನ್ನು ಮುಖ್ಯಮಂತ್ರಿಗಳು ಸಭೆಯಲ್ಲಿ ನೀಡಿದರು.
ಕರ್ನಾಟಕ ಏಕೀಕರಣದ ೫೦ನೇ ವರ್ಷದ ನೆನಪಿಗಾಗಿ ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣದ ಘೋಷಣೆಯನ್ನು ಇದೇ ಸಂದರ್ಭದಲ್ಲಿ ಮಾಡಿದ ಮುಖ್ಯಮಂತ್ರಿಗಳು, ಕಟ್ಟಡ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ಇಡಲಾಗುವುದು ಎಂದರು.
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ಹೇಳಿದರು.