ಮತಾಂಧರಿಗೆ ತಕ್ಕಶಾಸ್ತಿ

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಂದು ಸಿಎಂ ಸಿದ್ದರಾಮಯ್ಯರವರು ಕೋಮು ಘರ್ಷಣೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚೆಕ್ ವಿತರಣೆ ಮಾಡಲಾಯಿತು. ಸಚಿವರಾದ ಜಮೀರ್ ಅಹ್ಮದ್‌ಖಾನ್, ಎನ್. ಚಲುವರಾಯಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮತ್ತಿತರರು ಇದ್ದಾರೆ.

ಬೆಂಗಳೂರು, ಜೂ. ೧೯- ಕಾನೂನು ಕೈಗೆತ್ತಿಕೊಳ್ಳುವ ಮತಾಂಧರಿಗೆ ಅನೈತಿಕ ಪೊಲೀಸ್ ಗಿರಿಗೆ ಜಾತಿ, ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಎಚ್ಚರಿಕೆ ನೀಡಿದ್ದಾರೆ.ಬಿಜೆಪಿ ಅವಧಿಯಲ್ಲಿ ಕೋಮು ರಾಜಕಾರಣಕ್ಕೆ ಬಲಿಯಾದ ಬಳಿಕವೂ ಸರ್ಕಾರದ ತಾರತಮ್ಯ ನೀತಿಯಿಂದ ವಂಚನೆಗೊಳಗಾಗಿದ್ದ ಆರು ಕುಟುಂಬಗಳಿಗೆ ತಲಾ ೨೫ ಲಕ್ಷ ರೂ. ಪರಿಹಾರ ಚೆಕ್‌ನ್ನು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ವಿತರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಜಾತಿ, ಧರ್ಮ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತಾಂಧರಿಗೆ ಕಠಿಣ ಕ್ರಮ ಕೈಗೊಳ್ಳಲು ಗೃಹ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದರು.
ಬಿಜೆಪಿ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಕೋಮು ರಾಜಕಾರಣಕ್ಕೆ ಬಲಿಯಾದವರಿಗೆ ಪರಿಹಾರ ನೀಡುವಲ್ಲಿ ಬಿಜೆಪಿ ಮಾಡಿದ್ದ ಸಂವಿಧಾನ ವಿರೋಧಿ ತಾರತಮ್ಯ ನೀತಿಯನ್ನು ಅಳಿಸಿದ್ದೇವೆ ಎಂದರು.ಸರ್ಕಾರ ಒಂದು ಜಾತಿ, ಧರ್ಮಕ್ಕೆ ಸೇರಿದ್ದಲ್ಲ. ಸರ್ವರಿಗೂ ಸೇರಿದ್ದು ಸರ್ಕಾರದ ಸರ್ವರಿಗೂ ಸೇರಿರುವಾಗ ಬಿಡಿ ಬಿಡಿಯಾಗಿ ಒಂದು ಜಾತಿ, ಧರ್ಮದ ಪರವಾಗಿ ವರ್ತಿಸುವುದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ ಎಂದು ಅವರು ಹೇಳಿದರು.ಬಿಜೆಪಿಯ ದ್ವೇಷ ಮತ್ತು ತಾರತಮ್ಯ ರಾಜಕಾರಣದ ವಿರುದ್ಧ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸದನದಲ್ಲಿ ಧ್ವನಿ ಎತ್ತಿದ್ದೆ ಎಂಬುದನ್ನು ನೆನಪು ಮಾಡಿಕೊಂಡ ಅವರು, ಬಿಜೆಪಿ ಸರ್ಕಾರ ಕೋಮು ಗಲಭೆಗಳಿಗೆ ಬಲಿಯಾದ ಮೃತರ ಹೆಸರಿನಲ್ಲಿ ತಾರತಮ್ಯ ನೀತಿ ಅನುಸರಿಸಿತ್ತು. ಪರಿಹಾರ ನೀಡಿಕೆ ಮತ್ತು ಕುಟುಂಬದ ಕಣ್ಣೀರು ಒರೆಸುವುದರಲ್ಲೂ ತಾರತಮ್ಯ ಧೋರಣೆ ತಾಳಿತ್ತು ಎಂದು ಟೀಕಿಸಿದರು.ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದ ತಾರತಮ್ಯವನ್ನು ಇಂದು ಸರಿಪಡಿಸಿದ್ದೇವೆ ಎಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೋಮು ಗಲಭೆಗಳಲ್ಲಿ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಮಸೂದ್, ಮಂಡ್ಯ ಜಿಲ್ಲೆಯ ಇದ್ರಿಷ್ ಪಾಷಾ, ದಕ್ಷಣ ಕನ್ನಡ ಜಿಲ್ಲೆಯ ಮೊಹಮದ್ ಫಾಝಿಲ್, ಮಂಗಳೂರಿನ ಕಾಟಿ ಪಾಳ್ಯದ ಅಬ್ದುಲ್ ಜಲೀಂ, ದೀಪಕ್‌ರಾವ್ ಈ ಕುಟುಂಬಗಳಿಗೆ ತಲಾ ೨೫ ಲಕ್ಷ ರೂ.ಗಳ ಚೆಕ್‌ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಚೆಲುವರಾಯಸ್ವಾಮ, ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.