ಮತಾಂತರ ಸೇರಿ ಕಾಯ್ದೆಗಳ ರದ್ಧತಿ ವಿರುದ್ಧ ಬಿಜೆಪಿ ಹೋರಾಟ

ಬೆಂಗಳೂರು,ಜೂ.೧೬:ಮತಾಂತರ ಕಾಯ್ದೆ ಸೇರಿದಂತೆ ಬಿಜೆಪಿ ಅವಧಿಯಲ್ಲಿ ಜಾರಿ ಮಾಡಲಾಗಿದ್ದ ಕಾಯ್ದೆಯನ್ನು ರದ್ದು ಮಾಡುವ ತೀರ್ಮಾನ ಕೈಗೊಂಡಿರುವ ಕಾಂಗ್ರೆಸ್ ಸರ್ಕಾರ ವಿರುದ್ಧ ಕಿಡಿಕಾರಿರುವ ಬಿಜೆಪಿ, ಯಾವುದೇ ಕಾರಣಕ್ಕೂ ಈ ಕಾಯ್ದೆಗಳನ್ನು ವಾಪಸ್ ಪಡೆಯಬಾರದು ಎಂದು ಒತ್ತಾಯಿಸಿದೆ.ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಆರ್. ಅಶೋಕ್, ಕಾಂಗ್ರೆಸ್ ಪಕ್ಷ ಮತಾಂತರ ಕಾಯ್ದೆಯನ್ನು ರದ್ದು ಮಾಡಿರುವುದು ಯಾವ ಉದ್ದೇಶಕ್ಕಾಗಿ. ಬಲವಂತದ ಮತಾಂತರ ಸಲ್ಲದು ಎಂಬ ಭಾವನೆ ಹಾಗೂ ನಿಲುವನ್ನು ಮಹಾತ್ಮಗಾಂಧೀಜಿ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರು ಹೊಂದಿದ್ದರು. ಮತಾಂತರ ಆಗುವುದಾದರೆ ಕಾನೂನು ಪ್ರಕಾರ ಆಗಬೇಕು ಎಂಬ ಮತಾಂತರ ಕಾಯ್ದೆಯಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದರು.ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಂತಿದೆ ಎಂದು ದೂರಿದ ಅವರು, ಕಾಂಗ್ರೆಸ್ ಪಕ್ಷ ಮತ ಬ್ಯಾಂಕ್‌ಗಾಗಿ ಒಂದು ಸಮುದಾಯವನ್ನು ಓಲೈಸಲು ಈ ಕಾಯ್ದೆಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಮತಕ್ಕಾಗಿ ಯಾವ ಹಂತಕ್ಕೂ ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.ಜನಾದೇಶವನ್ನು ದುರ್ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಅವಕಾಶ ಕೊಡುವುದಿಲ್ಲ. ಕಾಯ್ದೆಗಳ ರದ್ಧತಿ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ಎಪಿಎಂಸಿ ಕಾಯ್ದೆಯನ್ನೂ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡೇ ಜಾರಿ ಮಾಡಿದ್ದೆವು. ರೈತರು ತಾವು ಬೆಳೆದ ಉತ್ಪನ್ನಗಳನ್ನು ಎಲ್ಲಿ ಬೇಕಾದರು ಮಾರಲು ಅವಕಾಶವಿತ್ತು. ಈಗ ಈ ಕಾಯ್ದೆ ರದ್ಧತಿಯಿಂದ ದಲ್ಲಾಳಿಗಳಿಗೆ
ಉಪಯೋಗವಾಗುತ್ತದೆ. ಕಾಂಗ್ರೆಸ್ ದಲ್ಲಾಳಿಗಳ ರಾಜ್ಯ ಮಾಡಲು ಹೊರಟಿದೆ ಎಂದು ದೂರಿದರು.ಪಠ್ಯ ಪುಸ್ತಕ ಪರಿಷ್ಕರಣೆಯನ್ನು ತರಾತುರಿಯಲ್ಲಿ ಮಾಡುತ್ತಿರುವುದು ಸರಿಯಲ್ಲ. ಇದು ಮಕ್ಕಳಿಗೆ ತೊಂದರೆ ಕೊಡುವ ನಿಮ್ಮ ಸಿದ್ಧಾಂತ ಹೇರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಆಂದೋಲನ ಸಭೆ
ಬಿಜೆಪಿಯ ನಿಲುವುಗಳ ವಿರುದ್ಧ ಜನಾಂದೋಲವನ್ನು ರೂಪಿಸಲು ಈ ತಿಂಗಳ ೧೯ ರಂದು ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆಂದೋಲನ ಸಭೆಗಳನ್ನು ನಡೆಸುವುದಾಗಿ ಅವರು ಹೇಳಿದರು.
ಕಮಿಷನ್ ಹುನ್ನಾರ:ಬಿ.ವೈ ವಿಜಯೇಂದ್ರ
ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ, ಅನ್ನಭಾಗ್ಯ ಯೋಜನೆಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸಲು ಹೊರಟಿರುವುದು ಹಾಸ್ಯಾಸ್ಪದ, ಇದು ಕಮಿಷನ್ ಹೊಡೆಯವು ಹುನ್ನಾರ ಎಂದು ಟೀಕಿಸಿದರು.ನಮ್ಮ ರಾಜ್ಯದಲ್ಲೇ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಬೆಳೆಯಲಾಗುತ್ತಿದೆ. ಇಲ್ಲಿಂದಲೇ ಖರೀದಿ ಮಾಡಿದರೆ ರಾಜ್ಯದ ರೈತರಿಗೆ ಅನುಕೂಲವಾಗುತ್ತದೆ. ಹೊರ ರಾಜ್ಯಗಳಿಂದ ಅಕ್ಕಿ ತರುವ ಹಿಂದೆ ಕಮಿಷನ್ ಗಿಟ್ಟಿಸುವ ಹುನ್ನಾರ ಇದೆ ಎಂದು ಆರೋಪಿಸಿದರು.ಮತಾಂತರ ಕಾಯ್ದೆ ನಿಷೇಧ, ಎಪಿಎಂಸಿ ಕಾಯ್ದೆ ಹಿಂಪಡೆಯುವ ಹಾಗೂ ಪಠ್ಯ ಪರಿಷ್ಕರಣೆಯಂತಹ ನಿರ್ಧಾರಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ ಎಂದವರು ಟೀಕಿಸಿದರು.