ಮತಾಂತರ ನಿಷೇಧ ಕಾಯ್ದೆ ವಾಪಸ್ಸು: ಜಾರ್ಜ್ ಸಂತಸ

ಬೀದರ್:ಜೂ.17: ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಶೇಧ ಕಾಯ್ದೆ ಹಾಲಿ ಕಾಂಗ್ರೆಸ್ ಸರ್ಕಾರ ಹಿಂಪಡೆದಿರುವುದಕ್ಕೆ ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರ ಜಾರ್ಜ್ ಫರ್ನಾಂಡಿಸ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಮತಾಂತರ ನಿಶೇಧ ಕಾಯ್ದೆ ಹಿಂಪಡೆಯುವುದರಿಂದ ಜನರಲ್ಲಿ ಸೌಹಾರ್ದತೆಯ ವಾತಾವರಣ ಮರುಕಳಿಸಲಿದೆ. ಸರ್ವ ಜನ ಸುಖಿನೋ ಭವಂತೂ ಎಂಬ ತತ್ವದಡಿ ಸಮಾನತೆಯಿಂದ ಹಾಗೂ ಏಕತೆಯಿಂದ ಬದುಕಲು ಸಾಧ್ಯವಾಗಲಿದೆ. ಅಲ್ಲದೇ ಇದರಿಂದ ರಾಷ್ಟ್ರೀಯ ಭಾವ್ಯಕ್ಯತೆ ಹಾಗೂ ಕೋಮು ಸಾಮರಸ್ಯ ಗಟ್ಟಿಗೊಳ್ಳುವ ಮೂಲಕ ಮಾನವಿಯತೆ ಎತ್ತಿ ಹಿಡಿಯುವ ಕಾರ್ಯ ಇದರಿಂದ ಸಾಧ್ಯವಾಗಲಿದೆ ಎಂದು ಜಾರ್ಜ್ ತಿಳಿಸಿದ್ದಾರೆ.
ಪಕ್ಷ ಯಾವುದಿರಲಿ ಆದರೆ ಅದರ ತತ್ವ ಹಾಗೂ ಸಿದ್ದಾಂತಗಳು ಯಾರಿಗೂ ತೊಂದರೆ ಕೊಡದ ರೀತಿಯಿಂದಿದ್ದರೆ ಸಮಾನತೆ ಹಾಗೂ ಸಹೋದರತೆ ಭಾವ ಇಮ್ಮಡಿಗೊಳ್ಳುತ್ತದೆ. ಸಿದ್ಧರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಎಲ್ಲರ ಏಳಿಗೆ ಬಯಸಿ ಕೆಲಸ ಮಾಡುವ ಉದ್ದೇಶ ಹೊಂದಿದೆ. ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳು ರಾಜ್ಯದ ಬಡಜನರ ಹಿತ ಕಾಪಾಡುವ ಕಾರ್ಯ ಆಗಲಿದ್ದು, ಜುಲೈನಲ್ಲಿ ಮಂಡಿಸಲಿರುವ ಬಜೆಟ್ ಅಧಿವೇಶನದಲ್ಲಿ ಸಾಮಾನ್ಯ ಜನರಿಗೆ ಹೊರೆಯಾಗದ ಹಾಗೂ ಎಲ್ಲರು ಮೆಚ್ಚುವಂಥ ಬಜೆಟ್ ಮುಖ್ಯಮಂತ್ರಿಗಳು ಮಂಡಿಸುವ ವಿಶ್ವಾಸ ಹೊಂದಿದ್ದಾಗಿ ಜಾರ್ಜ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.