ಮತಾಂತರ ನಿಷೇಧ ಕಾನೂನು ಮುಂದುವರೆಸಲು ಆಗ್ರಹ

ವಿಜಯಪುರ :ಜೂ.20: ದಿನಾಂಕ: 15.06.2023 ನೇ ಗುರುವಾರದಂದು ನಡೆದ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಸರ್ಕಾರವು ಈ ಹಿಂದೆ ಜಾರಿಯಲ್ಲಿದ್ದ ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯಲು ತೀರ್ಮಾನಿಸಿರುವುದನ್ನು ವಿಶ್ವ ಹಿಂದೂ ಪರಿಷದ್ ಖಂಡಿಸಿ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ಪ್ರಸಾರ ಪ್ರಮುಖರಾದ ಸುನೀಲ ಭೈರವಾಡಗಿ ಮಾತನಾಡಿ, ಭಾರತವು ಹಿಂದೂ ರಾಷ್ಟ್ರವಾಗಿದ್ದು ಇಲ್ಲಿ ಹಿಂದುಗಳೊಡನೆ ಅನ್ಯ ಧರ್ಮೀಯರೂ ಸಹ ಸಹಬಾಳ್ವೆಯನ್ನು ಮಾಡಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಕರ್ನಾಟಕದಲ್ಲೂ ಸಹ ಹಿಂದೂಗಳೊಡನೆ, ಅನ್ಯ ಧರ್ಮೀಯರೂ ಸಹ ತಮ್ಮ ಧರ್ಮ-ಮತಾಚರಣೆ ಮಾಡಲು ಅವಕಾಶವಿದೆ. ಇದನ್ನು ನಾವು ಒಪ್ಪುತ್ತೇವೆ ಮತ್ತು ಪ್ರಶ್ನಿಸುವುದಿಲ್ಲ. ಆದರೆ ಹಿಂದೂಗಳಿಗೆ ಆಮಿಷ ತೋರಿಸಿ ಅಥವಾ ಹೆದರಿಸಿ ಬಲವಂತವಾಗಿ ಮತಾಂತರಿಸುವುದನ್ನು ಅಥವಾ ಮರುಳು ಮಾಡಿ ಮತಾಂತರಿಸುವುದನ್ನು ನಾವು ಖಂಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ ಮಾತನಾಡಿ, ಭಾರತವು ಹಿಂದೂ ರಾಷ್ಟ್ರವಾಗಿದ ಮತ್ತು ಕರ್ನಾಟಕವು ಭಾರತದ ಒಂದು ಭಾಗವಾಗಿದೆ. ಇಲ್ಲಿನ ಹಿಂದೂಗಳನ್ನು ಮತಾಂತರದಿಂದ ರಕ್ಷಿಸಿ ನಮ್ಮ ಧರ್ಮವನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಅನ್ಯ ಧರ್ಮೀಯರಲ್ಲದ ಅತಿ ಸಂಖ್ಯೆಯಲ್ಲಿ ಹಿಂದೂಗಳೂ ಸಹ ಮತ ಹಾಕಿದ್ದು ಅವರ ಮತದಿಂದಲೇ ಕಾಂಗ್ರೆಸ್, ಅಧಿಕಾರಕ್ಕೆ ಬಂದಿದೆಯೇ ಹೊರತು ಕೇವಲ ಅಲ್ಪಸಂಖ್ಯಾತರಿಂದ. ಇದು ಕಾಂಗ್ರೆಸ್ ತನಗೆ ಮತ ನೀಡಿದ ಸಮಸ್ತ ಹಿಂದೂ ಸಮಾಜಕ್ಕೆ ದ್ರೋಹ ಬಗೆದಂತಾಗಿದೆ. ಕರ್ನಾಟಕದ ಹಿಂದುಗಳು ಇದನ್ನ ಖಂಡಿಸುವುದರೊಂದಿಗೆ ಮಂತ್ರಿಮಂಡಲವು ತಾನು ತೆಗೆದುಕೊಂಡಿರುವ ನಿರ್ಧಾರವನ್ನು ಕೂಡಲೇ ಹಿಂತೆದುಕೊಳ್ಳಬೇಕೆಂದು ಒತ್ತಾಯಿಸುತ್ತೇನೆ.
ಈ ಸಂದರ್ಭದಲ್ಲಿ ಸಹ ಕಾರ್ಯದರ್ಶಿಗಳಾದ ಸುನೀಲ ಜಮಖಂಡಿ, ಶೇಖರಗೌಡ ಹರನಾಳ ಮಾತನಾಡಿ, ಈ ಹಿಂದಿನ ಸರ್ಕಾರವು ಶಾಲಾ ಪಠ್ಯದಲ್ಲಿ ರಾಷ್ಟ್ರಪುರುಷರ ಪರಿಚಯವನ್ನು ಸೇರಿಸಿದ್ದನ್ನೂ ಸಹ ಸಂಕುಚಿತ ಭಾವನೆಯಿಂದ ಮತ್ತು ಅಲ್ಪ ಸಂಖ್ಯಾತರನ್ನು ತುಷ್ಟಿಕರಿಸುವ ಸಲುವಾಗಿ ಸಾವರ್ಕರ್ ರವರಂತಹ ಅಪ್ರತಿಮ ದೇಶಭಕ್ತರ ಪರಿಚಯದ ಪಾಠಗಳನ್ನು ತೆಗೆಯಲು ನಿರ್ಧರಿಸುವುದನ್ನೂ ಸಹ ನಾವು ಖಂಡಿಸುತ್ತೇವೆ. ಈ ರೀತಿ ಸಮಾಜದಲ್ಲಿ ಶಾಂತಿಯನ್ನು ಕದಡುವ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಉತ್ತಮ ಆಡಳಿತ ನೀಡಲೆಂದು ಸರ್ಕಾರವನ್ನು ವಿನಂತಿಸುತ್ತೇವೆ.
ಸುರೇಶ ಚವ್ಹಾಣ, ಪ್ರಕಾಶ ಬಿರಾದಾರ, ಸೋಮ ಹುಣಸಗಿ, ಸುರೇಶ ಕುಂಬಾರ, ಸಿದ್ದುರೂಡಿ ಬೋರಣ್ಣ, ಈರಯ್ಯ ಹಿರೇಮಠ, ಹಣಮಗೌಡ ಹೆಬ್ಬಾಳ, ಪ್ರಕಾಶ ಬಗಲಿ, ಕಲ್ಮೇಶ ಮೇಟಿ, ಶ್ರೀಧರ ಭಜಂತ್ರಿ, ನಿಖಿಲ ಬಿರಾದಾರ, ಶಿವಯೋಗೆಪ್ಪ ರಾಂಪುರ, ಶರಣು ಜೋಗೂರು, ಶವಿನಗೌಡ ಪಾಟೀಲ ಮುಂತಾದವರು ಇದ್ದರು.